ಕುಂಬಳೆ: ತನ್ನ ವಿವಾಹವನ್ನು ಪ್ರಿಯತಮನ ಜತೆ ನಡೆಸಿಕೊಡಬೇಕೆಂದು ಆರಿಕ್ಕಾಡಿ ನಿವಾಸಿ ಯುವತಿಯೊಬ್ಬಳು ಕುಂಬಳೆ ಪೊಲೀಸರಿಗೆ ಮನವಿ ಸಲ್ಲಿಸಿದ್ದಾಳೆ.

ಮೊಗ್ರಾಲ್ ಪುತ್ತೂರು ಪಂಚಾಯತ್ ವ್ಯಾಪ್ತಿಯ ನಿವಾಸಿಯಾಗಿರುವ 23ರ ಹರೆಯದ ಯುವಕ ಹಾಗೂ ತಾನು ಪ್ರೀತಿಸುತ್ತಿದ್ದು, ನಮ್ಮ ಮದುವೆಗೆ ಕಾನೂನು ರೀತಿಯ ಸಹಾಯ ಒದಗಿಸಬೇಕೆಂದು ಯುವತಿ ವಿನಂತಿಸಿದ್ದಾಳೆ. ಇದರಂತೆ ಪೊಲೀಸರು ಯುವಕ ಹಾಗೂ ಯುವತಿಯ ಮನೆಯವರನ್ನು ಠಾಣೆಗೆ ಕರೆಸಿ ಯುವತಿಯ ಬೇಡಿಕೆಗೆ ಸಂಬಂಧಿಸಿ ಎರಡೂ ಮನೆಯವರಿಗೆ ಮನವರಿಕೆ ಮಾಡಿಕೊಟ್ಟರು. ಆದರೆ ಎರಡೂ ಮನೆಯವರು ಈ ವಿವಾಹಕ್ಕೆ ಸಿದ್ಧರಾಗಲಿಲ್ಲ. ಇವರಿಬ್ಬರಿಗೂ ಪ್ರಾಯಪೂರ್ತಿಯಾಗಿರುವುದರಿಂದ ಅವರಿಗೆ ಸ್ವಯಂ ನಿರ್ಧಾರ ಕೈಗೊಳ್ಳಲು ಹಕ್ಕಿದೆ. ಆದ್ದರಿಂದ ಮತ್ತೊಮ್ಮೆ ಆಲೋಚಿಸಿ ನಿರ್ಧಾರ ತೆಗೆದುಕೊಳ್ಳಬೇಕೆಂದು ಪೊಲೀಸರು ಸಲಹೆ ನೀಡಿದ್ದಾರೆ.


ಈ ಬಗ್ಗೆ ಆಲೋಚಿಸುವುದಾಗಿ ಹೇಳಿ ಎರಡೂ ಮನೆಯವರು ಠಾಣೆಯಿಂದ ಮರಳಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ.