ಜೈಲಿಂದ ತಪ್ಪಿಸಲು 5 ವರ್ಷ ಸುರಂಗ ಕೊರೆದ; ಆದರೆ ಆತ ತಲುಪಿದ್ದು ಮಾತ್ರ ಸೀದಾ ಪೊಲೀಸನ ಚೇಂಬರಿಗೆ!

ನೋಡಿ ಫ್ರೆಂಡ್ಸ್, ಈ ಜಗತ್ತಿನಲ್ಲಿ ಹಠ ಅನ್ನೋದು ಇರಬೇಕು ನಿಜ. ಆದರೆ ಆ ಹಠಕ್ಕೆ ಸ್ವಲ್ಪ ಅದೃಷ್ಟದ ಸಾಥ್ ಇಲ್ಲದಿದ್ದರೆ ಏನಾಗುತ್ತದೆ ಎನ್ನುವುದಕ್ಕೆ ಬ್ರೆಜಿಲ್‌ನ ಈ ನತದೃಷ್ಟ ಕೈದಿಯೇ ಸಾಕ್ಷಿ.

ಬ್ರೆಜಿಲ್ ಅಂದ ಕೂಡಲೇ ನಮಗೆ ನೆನಪಾಗುವುದು ಫುಟ್ಬಾಲ್ ಅಥವಾ ಸುಂದರ ಸಮುದ್ರ ತೀರಗಳು. ಆದರೆ ಅಲ್ಲಿನ ಜೈಲುಗಳಿವೆಯಲ್ಲ, ಅವು ಅಕ್ಷರಶಃ ನರಕಕ್ಕೆ ಸಮಾನ. ಅಂತಹದ್ದೇ ಒಂದು ಹೈ-ಸೆಕ್ಯೂರಿಟಿ ಜೈಲಿನಲ್ಲಿ ಕಂಬಿ ಎಣಿಸುತ್ತಿದ್ದ ಆಸಾಮಿಗೆ ಹೇಗಾದರೂ ಮಾಡಿ ಹೊರಹೋಗಬೇಕೆಂಬ ಹುಚ್ಚು ಹತ್ತಿಕೊಂಡಿತ್ತು. ಸುಮ್ಮನೆ ಕಾಂಪೌಂಡ್ ಹಾರಿದರೆ ಪೊಲೀಸರು ಗುಂಡಿಕ್ಕಿ ಕೊಲ್ಲುತ್ತಾರೆ ಎಂಬ ಭಯ. ಅದಕ್ಕೇ ಆತ ಆಯ್ದುಕೊಂಡಿದ್ದು ಸಿನಿಮಾ ಸ್ಟೈಲ್‌ನ ದಾರಿ. ಅದೇ ʻಸುರಂಗ ಮಾರ್ಗ’.

ಅದು ಒಂದು ದಿನದ ಕೆಲಸವಲ್ಲ, ಬರೋಬ್ಬರಿ 5 ವರ್ಷಗಳ ತಪಸ್ಸು!

ಜೈಲಿನ ಕಲ್ಲು ಮಣ್ಣಿನ ಅಡಿಪಾಯವನ್ನು ಆತ ಸದ್ದಿಲ್ಲದೆ ಕೊರೆಯಲು ಶುರು ಮಾಡಿದ್ದ. ದಿನವೂ ಸ್ವಲ್ಪ ಸ್ವಲ್ಪವೇ ಮಣ್ಣು ತೆಗೆಯುವುದು, ಅದನ್ನು ಯಾರಿಗೂ ತಿಳಿಯದಂತೆ ವಿಲೇವಾರಿ ಮಾಡುವುದು… ಅಬ್ಬಾ! ಆತನ ತಾಳ್ಮೆ ನೋಡಿದರೆ ಸಾಕ್ಷಾತ್ ಭಗೀರಥನೇ ನಾಚಬೇಕು. ತನ್ನ ಸ್ವಾತಂತ್ರ್ಯದ ಕನಸು ಕಾಣುತ್ತಾ, ಕತ್ತಲ ಗುಹೆಯಲ್ಲಿ ಬೆವರು ಸುರಿಸುತ್ತಾ ಐದು ವರ್ಷ ಕಳೆದಿದ್ದ. ಪ್ರತಿ ಇಂಚು ಸುರಂಗ ಕೊರೆದಾಗಲೂ ಆತನಿಗೆ ಹೊರಗಿನ ಪ್ರಪಂಚ ಹತ್ತಿರವಾಗುತ್ತಿದೆ ಎಂಬ ಭ್ರಮೆ ಇತ್ತು. ʻಪ್ರಿಸನ್ ಬ್ರೇಕ್’ ಸಿನಿಮಾ ನಾಯಕನಿಗಿಂತ ನಾನೇನು ಕಡಿಮೆ ಇಲ್ಲ ಎಂಬ ಜಂಬ ಬೇರೆ!

ಆದರೆ ವಿಧಿಯಾಟ ಬೇರೆಯೇ ಇತ್ತು..

ಕೊನೆಗೂ ಆ ಸುದಿನ ಬಂದೇ ಬಿಟ್ಟಿತು. ಸುರಂಗದ ಕೊನೆಯ ಕಲ್ಲನ್ನು ಸರಿಸಿದ ಆ ನತದೃಷ್ಟ ಕೈದಿ, “ಹೊರಗಿನ ತಾಜಾ ಗಾಳಿ ಕುಡಿಯುತ್ತೇನೆ” ಎಂಬ ಆಸೆಯಿಂದ ಮೇಲೆ ಬಂದ. ಕಣ್ಣು ಬಿಟ್ಟು ನೋಡಿದರೆ ಸಾಕ್ಷಾತ್ ಜೈಲಿನ ಅಧಿಕಾರಿಗಳ (HR) ಚೇಂಬರ್! ಎದುರಿಗೇ ಜೈಲರ್ ಸಾಹೇಬರು ಕಾಫಿ ಕುಡಿಯುತ್ತಾ ಕುಳಿತಿದ್ದಾರೆ!

ಐದು ವರ್ಷ ಹಗಲು ರಾತ್ರಿ ಕಷ್ಟಪಟ್ಟು ಆತ ತಲುಪಿದ್ದು ಹೊರಗಿನ ಪ್ರಪಂಚವನ್ನಲ್ಲ, ಬದಲಿಗೆ ತನ್ನನ್ನು ಜೈಲಿಗೆ ಹಾಕಿದ ಅಧಿಕಾರಿಗಳ ಪಾದದ ಬುಡಕ್ಕೆ! ಬಂದ ದಾರಿಗೆ ಸುಂಕವಿಲ್ಲ ಎಂಬಂತೆ, ಆತನ ಐದು ವರ್ಷದ ಪರಿಶ್ರಮ ಸೆಕೆಂಡುಗಳಲ್ಲಿ ನೀರು ಪಾಲಾಯಿತು.

ಈಗ ಇಂಟರ್‌ನೆಟ್‌ನಲ್ಲಿ ಜನ ನಗುತ್ತಿದ್ದಾರೆ. “ಅವನ ಕನ್ಸಿಸ್ಟೆನ್ಸಿ ನೋಡಿಯಾದರೂ ಬಿಟ್ಟು ಬಿಡಬೇಕಿತ್ತು” ಅಂತ ಒಬ್ಬರು ವ್ಯಂಗ್ಯವಾಡಿದರೆ, “ಪಾಪ, ಸೀದಾ ಮೃತ್ಯುಕೂಪಕ್ಕೇ ನುಗ್ಗಿದನಲ್ಲ” ಅಂತ ಮತ್ತೊಬ್ಬರು ಮರುಗುತ್ತಿದ್ದಾರೆ. ಏನೇ ಇರಲಿ, ದಾರಿ ತಪ್ಪಿದವನಿಗೆ ಗುರಿ ತಲುಪಲು ಸಾಧ್ಯವಿಲ್ಲ ಎನ್ನುವುದಕ್ಕೆ ಈ ʻಬ್ರೆಜಿಲ್ ಸುರಂಗದ ಕಥೆ’ಗಿಂತ ದೊಡ್ಡ ಉದಾಹರಣೆ ಬೇಕಿಲ್ಲ!

error: Content is protected !!