
ಬೆಳ್ತಂಗಡಿ: ಜಲೀಲ್ ಮಾಲಕತ್ವದ ಇಲ್ಲಿನ ಬಾಬಾ ಆ್ಯಂಬುಲೆನ್ಸ್ನಲ್ಲೇ ಡ್ರಗ್ಸ್ ದಂಧೆ ಮಾಡುತ್ತಿದ್ದ ವಿಚಾರ ಪೊಲೀಸ್ ತನಿಖೆಯಲ್ಲಿ ಬಹಿರಂಗಗೊಂಡಿದ್ದು ಆರೋಪಿ ಎಸ್ಕೇಪ್ ಆಗಿದ್ದಾನೆ.
ಜಲೀಲ್ ಬಾಬಾ ತನ್ನ ಆ್ಯಂಬುಲೆನ್ಸ್ ಅನ್ನೇ ಡ್ರಗ್ ಪೂರೈಕೆಯ ಅಡ್ಡೆ ಮಾಡಿಕೊಂಡಿದ್ದು ಜೂನ್ 25ರಂದು ಮಂಗಳೂರಿನಲ್ಲಿ ಅಣ್ಣಪ್ಪ ಸ್ವಾಮಿ ಆಲಿಯಾಸ್ ಮನು ಎಂಬಾತನನ್ನು ಎಂಡಿಎಂಎ ಸಹಿತ ಬಂಧಿಸಲಾಗಿತ್ತು. ಈ ವೇಳೆ ಪೊಲೀಸರಿಗೆ ಬಾಗಲಕೋಟೆಯ ಡ್ರಗ್ ಲಿಂಕ್ ಬಗ್ಗೆ ಮಾಹಿತಿ ದೊರೆತಿತ್ತು. ಹೀಗಾಗಿ ಜುಲೈ 15ರಂದು ಬಾಗಲಕೋಟೆಯ ಲಾಡ್ಜ್ ಮೇಲೆ ದಾಳಿ ನಡೆಸಿದ್ದ ಮಂಗಳೂರು ಸಿಸಿಬಿ ಪೊಲೀಸರು, ಅಲ್ಲಿ ಮೂವರನ್ನು ಬಂಧಿಸಿ ಐದು ಕೋಟಿ ಮೌಲ್ಯದ ಐದು ಕೆಜಿ ಡ್ರಗ್ಸ್ ವಶ ಪಡಿಸಿಕೊಂಡಿದ್ದರು.
ಈ ವೇಳೆ ಬೆಳ್ತಂಗಡಿಯ ಮಹಮ್ಮದ್ ಅಲ್ಫಾಜ್, ಮಹಮ್ಮದ್ ಮುಸ್ತಾಫಾ ಅರೆಸ್ಟ್ ಆಗಿದ್ದರು. ಬಂಧಿತ ಆರೋಪಿಗಳು ಜಲೀಲ್ ಬಾಬಾಗೆ ಡ್ರಗ್ಸ್ ಒದಗಿಸುತ್ತಿದ್ದ ಮಾಹಿತಿ ತನಿಖೆ ವೇಳೆ ಲಭ್ಯವಾಗಿದ್ದು, ಸದ್ಯ ಮೊಬೈಲ್ ಆಫ್ ಮಾಡಿಕೊಂಡು ಜಲೀಲ್ ಬಾಬಾ ಎಸ್ಕೇಪ್ ಆಗಿದ್ದಾನೆ ಎನ್ನಲಾಗಿದೆ.