ಇರಾನ್‌ನಿಂದ ಹೊಸ ʻಮಿಸೈಲ್’ ಬಾಂಬ್: 1,000 ಕೆಜಿ ತೂಕದ ವಿನಾಶಕಾರಿ ಕ್ಷಿಪಣಿ ದಾಳಿಯ ಎಚ್ಚರಿಕೆ!

ಟೆಹ್ರಾನ್: ಅಮೆರಿಕ ಮತ್ತು ಇಸ್ರೇಲ್ ಪಡೆಗಳ ವಿರುದ್ಧದ ಯುದ್ಧದಲ್ಲಿ ಇರಾನ್ ಈಗ ಅತಿ ದೊಡ್ಡ ಸಂಘರ್ಷಕ್ಕೆ ಮುನ್ನುಡಿ ಬರೆದಿದೆ. ಇನ್ನು ಮುಂದೆ ನಡೆಸುವ ಪ್ರತಿಯೊಂದು ಕ್ಷಿಪಣಿ ದಾಳಿಯೂ ಕನಿಷ್ಠ 1,000 ಕೆಜಿ (1 ಟನ್) ತೂಕದ ಸ್ಫೋಟಕಗಳನ್ನು ಹೊತ್ತೊಯ್ಯಲಿದೆ ಎಂದು ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ಘೋಷಿಸಿದೆ. ಇದು ಯುದ್ಧದ ವಿನಾಶಕಾರಿ ಶಕ್ತಿಯನ್ನು ದುಪ್ಪಟ್ಟುಗೊಳಿಸುವ ಮುನ್ಸೂಚನೆಯಾಗಿದೆ.

ಇದುವರೆಗೆ ಇರಾನ್ ಅಗ್ಗದ ಬೆಲೆಯ ʻಶಾಹೆದ್’ ಡ್ರೋನ್ ಮೂಲಕ ಶತ್ರುಗಳ ವಾಯು ರಕ್ಷಣಾ ವ್ಯವಸ್ಥೆಯನ್ನು ದಿಕ್ಕು ತಪ್ಪಿಸುವ ತಂತ್ರ ಅನುಸರಿಸುತ್ತಿತ್ತು. ಆದರೆ ಈಗಿನ ಹೊಸ ಹಂತದಲ್ಲಿ, ಅತ್ಯಂತ ವೇಗವಾಗಿ ಚಲಿಸುವ ಮತ್ತು ತಡೆಯಲು ಕಷ್ಟವಾಗುವ ಭಾರೀ ತೂಕದ ಕ್ಷಿಪಣಿಗಳ ಮೇಲೆ ಗಮನ ಹರಿಸುತ್ತಿದೆ. ಶತ್ರುಗಳ ವಿಮಾನ ನಿಲ್ದಾಣಗಳು, ಭೂಗತ ಕಮಾಂಡ್ ಸೆಂಟರ್‌ಗಳು ಮತ್ತು ಪ್ರಮುಖ ಸೇನಾ ನೆಲೆಗಳನ್ನು ಸಂಪೂರ್ಣವಾಗಿ ಧ್ವಂಸ ಮಾಡುವುದು ಇರಾನ್‌ ಗುರಿ.


ದುಬೈ ವಿಮಾನ ನಿಲ್ದಾಣ ಮತ್ತು ಸೌದಿ ಅರೇಬಿಯಾದ ರಾಸ್ ತನುರಾ ತೈಲ ಸಂಸ್ಕರಣಾಗಾರಗಳ ಮೇಲೆ ಈಗಾಗಲೇ ದಾಳಿ ನಡೆದಿದ್ದು, ಇನ್ನು ಮುಂದೆ ಇಂತಹ ದಾಳಿಗಳ ತೀವ್ರತೆ ಮತ್ತಷ್ಟು ಹೆಚ್ಚಲಿದೆ ಎಂದು ಬ್ರಿಗೇಡಿಯರ್ ಜನರಲ್ ಮಜಿದ್ ಮೂಸವಿ ತಿಳಿಸಿದ್ದಾರೆ.

ಇರಾನ್ ಮಧ್ಯಪ್ರಾಚ್ಯದಲ್ಲೇ ಅತಿ ದೊಡ್ಡ ಕ್ಷಿಪಣಿ ಸಂಗ್ರಹವನ್ನು ಹೊಂದಿದೆ. ಅವುಗಳಲ್ಲಿ ಸೌಮರ್ (Soumar) ಇದು 3,000 ಕಿ.ಮೀ. ವ್ಯಾಪ್ತಿ ಹೊಂದಿದ್ದು, ಪರಮಾಣು ಶಸ್ತ್ರಾಸ್ತ್ರ ಹೊತ್ತೊಯ್ಯುವ ಸಾಮರ್ಥ್ಯ ಹೊಂದಿದೆ. ಇನ್ನೊಂದು ಸೆಜ್ಜಿಲ್ (Sejjil) ಕ್ಷಿಪಣಿ 2,000 ಕಿ.ಮೀ ದೂರದವರೆಗೆ ದಾಳಿ ಮಾಡಬಲ್ಲದು. ಖೋರಮ್‌ಶಹರ್ (Khorramshahr) ಕ್ಷಿಪಣಿ ಇದು 1,800 ಕೆ.ಜಿ.ವರೆಗಿನ ಸ್ಫೋಟಕಗಳನ್ನು ಹೊತ್ತೊಯ್ಯಬಲ್ಲದು ಮತ್ತು ಮ್ಯಾಕ್ 8 ವೇಗದಲ್ಲಿ ಚಲಿಸಿ ಶತ್ರುಗಳ ಕ್ಷಿಪಣಿ ನಿರೋಧಕ ವ್ಯವಸ್ಥೆಯನ್ನು ತಪ್ಪಿಸಬಲ್ಲದು.

ಈ ಯುದ್ಧದಲ್ಲಿ ಆರ್ಥಿಕ ಲೆಕ್ಕಾಚಾರಗಳು ಇರಾನ್ ಪರವಾಗಿವೆ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. ಕೇವಲ $20,000 (ಅಂದಾಜು ₹16 ಲಕ್ಷ) ಬೆಲೆಯ ಒಂದು ಇರಾನ್ ಡ್ರೋನ್ ಅನ್ನು ಹೊಡೆದುರುಳಿಸಲು ಅಮೆರಿಕವು $4 ಮಿಲಿಯನ್ (ಅಂದಾಜು ₹33 ಕೋಟಿ) ಬೆಲೆಯ ಪೇಟ್ರಿಯಾಟ್ (PATRIOT) ಕ್ಷಿಪಣಿಯನ್ನು ಬಳಸಬೇಕಿದೆ. ಒಂದು ವೇಳೆ ಇಸ್ರೇಲ್‌ನ ಆರೋ-3 ಕ್ಷಿಪಣಿ ಬಳಸಿದರೆ ಅದರ ಬೆಲೆ ಅಂದಾಜು $3 ಮಿಲಿಯನ್. ಇರಾನ್ ಈಗ ಭಾರೀ ತೂಕದ ಕ್ಷಿಪಣಿಗಳನ್ನು ಬಳಸಲು ಆರಂಭಿಸಿರುವುದು ಅಮೆರಿಕ ಮತ್ತು ಇಸ್ರೇಲ್‌ನ ರಕ್ಷಣಾ ವ್ಯವಸ್ಥೆಯನ್ನು ಆರ್ಥಿಕವಾಗಿ ಹೈರಾಣು ಮಾಡುವ ತಂತ್ರವಾಗಿದೆ.

error: Content is protected !!