
ಮುಂಬೈ: ಐಸಿಸಿ ಪುರುಷರ ಟಿ20 ವಿಶ್ವಕಪ್ 2026ರಲ್ಲಿ ಐತಿಹಾಸಿಕ ಗೆಲುವು ಸಾಧಿಸಿದ ಟೀಮ್ ಇಂಡಿಯಾಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) 131 ಕೋಟಿ ರೂಪಾಯಿಗಳ ಬೃಹತ್ ನಗದು ಬಹುಮಾನವನ್ನು ಘೋಷಿಸಿದೆ.

ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡವನ್ನು ಮಣಿಸಿ ಸತತ ಎರಡನೇ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸಿದ ಸೂರ್ಯಕುಮಾರ್ ಯಾದವ್ ನೇತೃತ್ವದ ತಂಡಕ್ಕೆ ಬಿಸಿಸಿಐ ಈ ಗೌರವ ನೀಡಿದೆ. ಈ ಮೂಲಕ ಮಂಡಳಿಯು ತನ್ನದೇ ಹಳೆಯ ದಾಖಲೆಯನ್ನು ಅಳಿಸಿ ಹಾಕಿದೆ.

2024ರಲ್ಲಿ ರೋಹಿತ್ ಶರ್ಮಾ ನೇತೃತ್ವದ ತಂಡ ಚಾಂಪಿಯನ್ ಆದಾಗ ಬಿಸಿಸಿಐ 125 ಕೋಟಿ ರೂಪಾಯಿಗಳನ್ನು ನೀಡಿತ್ತು. ಆದರೆ ಈಗ ಸತತ ಎರಡನೇ ಬಾರಿ ಟಿ20 ವಿಶ್ವಕಪ್ ಗೆದ್ದು ಇತಿಹಾಸ ನಿರ್ಮಿಸಿದ ತಂಡಕ್ಕೆ ತನ್ನದೇ ಹಳೆಯ ದಾಖಲೆಯನ್ನು ಮುರಿದು ಹೆಚ್ಚು ಮೊತ್ತದ ಬಹುಮಾನವನ್ನು ಪ್ರಕಟಿಸಿದೆ. ಅಷ್ಟೇ ಅಲ್ಲದೆ, ಟಿ20 ವಿಶ್ವಕಪ್ ಇತಿಹಾಸದಲ್ಲಿ ಮೂರು ಬಾರಿ ಪ್ರಶಸ್ತಿ ಗೆದ್ದ ಮೊದಲ ತಂಡ ಎಂಬ ಹೆಗ್ಗಳಿಕೆಗೂ ಭಾರತ ಪಾತ್ರವಾಗಿದೆ. ಈ ಐತಿಹಾಸಿಕ ಸಾಧನೆಗಾಗಿ ಬಿಸಿಸಿಐ ಪದಾಧಿಕಾರಿಗಳು ಆಟಗಾರರು, ತರಬೇತುದಾರರು ಮತ್ತು ಆಯ್ಕೆ ಸಮಿತಿಗೆ ಅಭಿನಂದನೆ ಸಲ್ಲಿಸಿದ್ದಾರೆ.

ಬಿಸಿಸಿಐ ಮಾತ್ರವಲ್ಲದೆ ಅಂತರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಕೂಡ ವಿಶ್ವವಿಜೇತ ಭಾರತಕ್ಕೆ ಭಾರಿ ಮೊತ್ತದ ಬಹುಮಾನ ನೀಡಿದೆ.
ಟೂರ್ನಿಯ ಚಾಂಪಿಯನ್ ಆದ ಟೀಮ್ ಇಂಡಿಯಾಗೆ ಐಸಿಸಿಯಿಂದ ಸುಮಾರು 27.48 ಕೋಟಿ ರೂಪಾಯಿ (3 ಮಿಲಿಯನ್ ಅಮೆರಿಕನ್ ಡಾಲರ್) ಬಹುಮಾನ ಲಭಿಸಿದೆ. ಇದರ ಜೊತೆಗೆ ಲೀಗ್ ಹಂತ ಮತ್ತು ಸೂಪರ್ 8 ಹಂತದಲ್ಲಿ ಗೆದ್ದ ಪ್ರತಿಯೊಂದು ಪಂದ್ಯಗಳಿಗೂ ಪ್ರತ್ಯೇಕವಾಗಿ ಬೋನಸ್ ಮೊತ್ತವನ್ನು ಐಸಿಸಿ ನೀಡಿದೆ.