ಸಿದ್ದು ʻಬಜೆಟ್’ ಅಸ್ತ್ರಕ್ಕೆ ಡಿಕೆಶಿ ʻಡೆಲ್ಲಿ’ ತಂತ್ರ!: ನಾಯಕತ್ವ ಬದಲಾವಣೆಯ ‌ ಕೌಂಟ್‌ಡೌನ್ ಆರಂಭ!?

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಮಹತ್ವಾಕಾಂಕ್ಷೆಯ ಬಜೆಟ್ ಮಂಡಿಸಿ, “ಹೈಕಮಾಂಡ್ ಹಸಿರು ನಿಶಾನೆ ತೋರಿದರೆ ಮುಂದಿನ ಎರಡು ವರ್ಷಗಳ ಕಾಲ ನಾನೇ ಆಯವ್ಯಯ ಮಂಡಿಸುತ್ತೇನೆ” ಎನ್ನುವ ಮೂಲಕ ಪರೋಕ್ಷವಾಗಿ ಪೂರ್ಣಾವಧಿ ಸಿಎಂ ಪಟ್ಟದ ಇಂಗಿತ ವ್ಯಕ್ತಪಡಿಸಿದ ಬೆನ್ನಲ್ಲೇ, ರಾಜ್ಯ ರಾಜಕೀಯದಲ್ಲಿ ಸಂಚಲನವೊಂದು ಸೃಷ್ಟಿಯಾಗಿದೆ.

ಸಿದ್ದರಾಮಯ್ಯ ಅವರ ಈ ಹೇಳಿಕೆ ಹೊರಬರುತ್ತಿದ್ದಂತೆಯೇ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರೊಂದಿಗೆ ಒಂದೇ ವಿಮಾನದಲ್ಲಿ ದೆಹಲಿಗೆ ಪ್ರಯಾಣ ಬೆಳೆಸಿರುವುದು ಈಗ ಎಲ್ಲರ ಹುಬ್ಬೇರುವಂತೆ ಮಾಡಿದೆ. ಕಲಬುರಗಿಯ ಚಿತ್ತಾಪುರದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಮುಗಿಸಿ, ಅಲ್ಲಿಂದಲೇ ನೇರವಾಗಿ ಹೈಕಮಾಂಡ್ ನಾಯಕರ ಜೊತೆ ದಿಲ್ಲಿಗೆ ಹಾರಿದ ಡಿಕೆಶಿ ಅವರ ಈ ನಡೆ, ಕೇವಲ ʻಖಾಸಗಿ ಭೇಟಿ’ ಎಂಬ ಸಮರ್ಥನೆಯ ಆಚೆಗೂ ಹತ್ತಾರು ರಾಜಕೀಯ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ವಿಧಾನಮಂಡಲದ ಬಜೆಟ್ ಅಧಿವೇಶನ ನಡೆಯುತ್ತಿರುವ ಈ ಸಂದಿಗ್ಧ ಸಮಯದಲ್ಲಿಯೇ ನಾಯಕತ್ವ ಬದಲಾವಣೆ ಮತ್ತು ಸಂಪುಟ ಪುನರ್‌ರಚನೆಯ ಚರ್ಚೆಗಳು ಕಾಂಗ್ರೆಸ್ ಪಾಳಯದಲ್ಲಿ ಗರಿ ಗೆದರಿವೆ. ಸಿದ್ದರಾಮಯ್ಯ ಅವರ ʻಎರಡು ವರ್ಷದ’ ಹೇಳಿಕೆಯು ಡಿಕೆಶಿ ಬಣದಲ್ಲಿ ಆತಂಕ ಮೂಡಿಸಿರುವುದು ಸುಳ್ಳಲ್ಲ. ಹೀಗಾಗಿಯೇ, ಮಲ್ಲಿಕಾರ್ಜುನ ಖರ್ಗೆ ಅವರ ಸಮ್ಮುಖದಲ್ಲಿಯೇ ದೆಹಲಿಯಲ್ಲಿ ತಮ್ಮ ಪಾಲಿನ ಅಧಿಕಾರ ಹಂಚಿಕೆಯ ಒಪ್ಪಂದದ ಬಗ್ಗೆ ಹೈಕಮಾಂಡ್ ಮೇಲೆ ಒತ್ತಡ ಹೇರಲು ಈ ಭೇಟಿ ಸಾಕ್ಷಿಯಾಗಬಹುದು ಎನ್ನಲಾಗುತ್ತಿದೆ. ಇದರ ಜೊತೆಗೆ ಮಾರ್ಚ್ 10 ರಂದು ಕೆಪಿಸಿಸಿ ಅಧ್ಯಕ್ಷರಾಗಿ ಆರು ವರ್ಷ ಪೂರೈಸುತ್ತಿರುವ ನೆನಪಿಗಾಗಿ ಡಿಕೆಶಿ ಹಮ್ಮಿಕೊಂಡಿರುವ ಶಾಸಕರ ಬೃಹತ್ ಭೋಜನ ಕೂಟವು, ಈ ದೆಹಲಿ ಭೇಟಿಯ ನಂತರ ಮತ್ತಷ್ಟು ಮಹತ್ವ ಪಡೆದುಕೊಂಡಿದೆ.

ಒಂದೆಡೆ ಸಿದ್ದರಾಮಯ್ಯ ಅವರು ಬಜೆಟ್ ಮೂಲಕ ತಮ್ಮ ಆಡಳಿತಾತ್ಮಕ ಹಿಡಿತವನ್ನು ಸಾಬೀತುಪಡಿಸುತ್ತಿದ್ದರೆ, ಮತ್ತೊಂದೆಡೆ ಡಿ.ಕೆ. ಶಿವಕುಮಾರ್ ಅವರು ಸಂಘಟನಾತ್ಮಕ ಶಕ್ತಿ ಮತ್ತು ಹೈಕಮಾಂಡ್ ಜೊತೆಗಿನ ನಿಕಟತೆಯನ್ನು ಬಳಸಿಕೊಂಡು ತಮ್ಮ ಹಕ್ಕನ್ನು ಪ್ರತಿಪಾದಿಸುತ್ತಿದ್ದಾರೆ. ಮಾರ್ಚ್ 27 ರಂದು ಬಜೆಟ್ ಅಧಿವೇಶನ ಮುಕ್ತಾಯಗೊಳ್ಳಲಿದ್ದು, ಅಲ್ಲಿಯವರೆಗೆ ಈ ರಾಜಕೀಯ ಹಗ್ಗಜಗ್ಗಾಟ ತೆರೆಮರೆಯಲ್ಲಿ ತೀವ್ರಗೊಳ್ಳಲಿದೆ. ದೆಹಲಿಯ ಈ ರಹಸ್ಯ ಪಯಣವು ಮುಖ್ಯಮಂತ್ರಿ ಕುರ್ಚಿಯ ಪಾಲಿನ ಬದಲಾವಣೆಯ ಮುನ್ಸೂಚನೆಯೋ ಅಥವಾ ಕೇವಲ ಸೌಹಾರ್ದಯುತ ಭೇಟಿಯೋ ಎಂಬುದು ಏಪ್ರಿಲ್ ತಿಂಗಳ ವೇಳೆಗೆ ನಿಚ್ಚಳವಾಗಲಿದೆ.

error: Content is protected !!