
ಗುರುಗ್ರಾಮ: ತನ್ನ ಮಾಜಿ ಪ್ರೇಯಸಿ ಎಂದು ತಪ್ಪಾಗಿ ಭಾವಿಸಿ ವ್ಯಕ್ತಿಯೋರ್ವ ಇನ್ಯಾವುದೋ ಯುವತಿಗೆ ಆ್ಯಸಿಡ್ ಎರಚಿರುವ ಘಟನೆ ಭಾನುವಾರ(ಮಾ.08) ರಾತ್ರಿ ಗುರುಗ್ರಾಮ್ ಸಿವಿಲ್ ಆಸ್ಪತ್ರೆಯ ಆವರಣದಲ್ಲಿ ನಡೆದಿದ್ದು, ಯುವತಿ ಗಂಭೀರವಾಗಿ ಗಾಯಗೊಂಡಿರುವ ಪರಿಣಾಮ ಚಿಕಿತ್ಸೆಗಾಗಿ ಪಿಜಿಐಎಂಎಸ್ ರೋಹ್ಟಕ್‌ಗೆ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿ ಹಿಂದಿನಿಂದ ಬಂದು ಯುವತಿಯ ಮೇಲೆ ಆ್ಯಸಿಡ್ ಎರಚಿದ ನಂತರ ಪರಾರಿಯಾಗಿದ್ದಾನೆ ಎನ್ನಲಾಗಿದೆ.
20 ವರ್ಷದ ಯುವತಿ ಹಲ್ಲೆ ನಡೆಸಿದ ವ್ಯಕ್ತಿ ತನ್ನ ಮಾಜಿ ಗೆಳೆಯನಾಗಿದ್ದು, ತನ್ನ ಮೇಲೆ ಹಲ್ಲೆ ನಡೆಸಲು ಪ್ರಯತ್ನಿಸುವಾಗ ತಪ್ಪಾಗಿ ಇನ್ನೊಬ್ಬ ಯುವತಿಯ ಮೇಲೆ ದಾಳಿ ನಡೆಸಿರಬಹುದು ಎಂದು ಆರೋಪಿಸಿದ್ದಾರೆ.

ಆ ವ್ಯಕ್ತಿ ತನ್ನ ಮೇಲೆ ಹಲ್ಲೆ ನಡೆಸಿದ್ದಾಗಿ ಮತ್ತು ನಂತರ ಆಸ್ಪತ್ರೆಗೆ ತನ್ನನ್ನು ಹುಡುಕಿಕೊಂಡು ಬಂದಿದ್ದಾಗಿ ಯುವತಿ ಹೇಳಿಕೊಂಡಿದ್ದಾಳೆ, ಅಲ್ಲಿ ಮತ್ತೊಬ್ಬ ಮಹಿಳೆ ಆ್ಯಸಿಡ್ ದಾಳಿಯಲ್ಲಿ ಗಾಯಗೊಂಡಿದ್ದಾಳೆ ಎಂದು ಮಾಹಿತಿ ನೀಡಿದ್ದಾರೆ. ತಾಯಿಯ ಚಿಕ್ಕಮ್ಮನನ್ನು ಭೇಟಿ ಮಾಡಲು ಹೋಗಿದ್ದ ನುಹ್ ನಿವಾಸಿ ಮೇಲೆ ಆ್ಯಸಿಡ್ ದಾಳಿ ನಡೆದಿದೆ.
ಆಕೆಯ ಕುಟುಂಬದವರು ಚಿಕಿತ್ಸೆಗಾಗಿ ಸಿವಿಲ್ ಆಸ್ಪತ್ರೆಗೆ ಕರೆದೊಯ್ದರು. ನಾವಿಬ್ಬರೂ ಒಂದೇ ರೀತಿಯ ಉಡುಪು ಹಾಕಿದ್ದರಿಂದ ಆ್ಯಸಿಡ್ ಎರಚಿರಬಹುದು ಎಂದು ಹೇಳಿದ್ದಾರೆ. ಭುಜ, ಕುತ್ತಿಗೆ, ಕೆನ್ನೆ ಮತ್ತು ತೋಳುಗಳಿಗೆ ಗಾಯಗಳಾಗಿದ್ದು, ನಂತರ ಹೆಚ್ಚಿನ ಚಿಕಿತ್ಸೆಗಾಗಿ ಪಿಜಿಐಎಂಎಸ್ ರೋಹ್ಟಕ್‌ಗೆ ಕರೆದೊಯ್ಯಲಾಗಿದೆ.

ಆಸ್ಪತ್ರೆಯ ಸಿಸಿಟಿವಿ ದೃಶ್ಯಾವಳಿಗಳನ್ನು ವಿಶ್ಲೇಷಿಸಲಾಗುತ್ತಿದ್ದು, ತನಿಖೆಯ ಭಾಗವಾಗಿ ಮಹಿಳೆ ಮತ್ತು ಆಕೆಯ ಕುಟುಂಬದವರ ಹೇಳಿಕೆಗಳನ್ನು ದಾಖಲಿಸಿಕೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.