ಟೆಲ್ ಅವಿವ್: ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಹತ್ಯೆಯ ಬೆನ್ನಲ್ಲೇ, ಇಸ್ರೇಲ್ ಈಗ ಇಡೀ ಇರಾನ್ ಆಡಳಿತಕ್ಕೇ ಚರಮಗೀತೆ ಹಾಡಲು ಸಜ್ಜಾಗಿದೆ. ಇಸ್ರೇಲ್ ರಕ್ಷಣಾ ಸಚಿವ ಇಸ್ರೇಲ್ ಕಾಟ್ಜ್ ನೀಡಿರುವ ಒಂದು ಹೇಳಿಕೆ ಖಮೇನಿ ಉತ್ತರಾಧಿಕಾರಿಗಳಿಗೆ ನಡುಕ ಹುಟ್ಟಿಸಿದೆ.

“ಇರಾನ್ ತನ್ನ ಮುಂದಿನ ಸರ್ವೋಚ್ಛ ನಾಯಕನನ್ನಾಗಿ ಯಾರನ್ನೇ ಆಯ್ಕೆ ಮಾಡಲಿ, ಅವರ ಹೆಸರನ್ನು ನಾವು ಪಟ್ಟಿಯಿಂದ ಅಳಿಸಿ ಹಾಕುತ್ತೇವೆ. ಇಸ್ರೇಲ್ ಅನ್ನು ನಾಶಮಾಡಲು ಹವಣಿಸುವವರು ಯಾರು ಈ ಪೀಠವೇರಿದರೂ, ಅವರು ನಮ್ಮ ಮುಂದಿನ ಗುರಿ! ಅವನ ಹೆಸರು ಯಾವುದಾದರೇನು, ಅವನು ಎಲ್ಲಿಯೇ ಅಡಗಿರಲಿ, ಅವನ ಅಂತ್ಯ ಮಾತ್ರ ಖಚಿತ” ಎಂದು ಕಾಟ್ಜ್ ಗುಡುಗಿದ್ದಾರೆ. ಇದು ಇರಾನ್‌ನ ಸಾರ್ವಭೌಮತ್ವಕ್ಕೆ ಇಸ್ರೇಲ್ ನೀಡಿದ ಬಹಿರಂಗ ಮೃತ್ಯು ಪತ್ರ!

ಪ್ರಧಾನ ಮಂತ್ರಿ ಮತ್ತು ನಾನು ಈಗಾಗಲೇ ಐಡಿಎಫ್‌ಗೆ (ಇಸ್ರೇಲ್ ರಕ್ಷಣಾ ಪಡೆ) ʻಲಯನ್ಸ್ ರೋರ್’ ಎಂಬ ಭೀಕರ ಮಿಲಿಟರಿ ಕಾರ್ಯಾಚರಣೆಯ ಮೂಲಕ ಶತ್ರು ಸಂಹಾರಕ್ಕೆ ಆದೇಶ ನೀಡಿದ್ದೇವೆ ಎಂದು ಅವರು ತಿಳಿಸಿದ್ದಾರೆ.
ಅಮೆರಿಕದ ಬೆಂಬಲದೊಂದಿಗೆ ಇರಾನ್‌ನ ಮಿಲಿಟರಿ ಶಕ್ತಿಯನ್ನು ಧೂಳೀಪಟ ಮಾಡಿ, ಅಲ್ಲಿನ ಸರ್ಕಾರವನ್ನು ಬುಡಮೇಲು ಮಾಡುವುದೇ ಇಸ್ರೇಲ್‌ನ ಏಕೈಕ ಗುರಿಯಾಗಿದೆ. ಕೇವಲ ಮೌಖಿಕ ಎಚ್ಚರಿಕೆಯಲ್ಲದೆ, ಮಂಗಳವಾರ ಇರಾನ್‌ನ ಹೊಸ ನಾಯಕನ ಆಯ್ಕೆಗಾಗಿ 88 ಹಿರಿಯ ಧರ್ಮಗುರುಗಳು ಸಭೆ ಸೇರಿದ್ದ ಕಟ್ಟಡದ ಮೇಲೆಯೇ ಇಸ್ರೇಲ್ ಬಾಂಬ್ ಮಳೆಗರೆದು ತನ್ನ ರೌದ್ರಾವತಾರವನ್ನು ಪ್ರದರ್ಶಿಸಿದೆ. ಇಸ್ರೇಲ್‌ನ ಈ ಬೇಟೆಯಾಟದ ಮುಂದಿನ ಸರಣಿ ದಾಳಿಗಳು ಇರಾನ್‌ನ ಅಸ್ತಿತ್ವವನ್ನೇ ಅಲುಗಾಡಿಸುತ್ತಿದ್ದು, ಜಗತ್ತು ಮಹಾಯುದ್ಧದ ಭೀತಿಯಲ್ಲಿ ಉಸಿರು ಬಿಗಿಹಿಡಿದು ಕುಳಿತಿದೆ!
ಅಮೆರಿಕದ ದಾಳಿಯಲ್ಲಿ ಹತ್ಯೆಗೀಡಾದ ಅಲಿ ಖಮೇನಿ ಅವರ 56 ವರ್ಷದ ಪುತ್ರ ಮೊಜ್ತಾಬಾ ಖಮೇನಿ ಅವರನ್ನು ಇರಾನ್‌ನ ನೂತನ ಪರಮೋಚ್ಛ ನಾಯಕನಾಗಿ ದೇಶದ ಶಿಯಾ ಧಾರ್ಮಿಕ ಪಂಡಿತರನ್ನೊಳಗೊಂಡ ಸಂಸ್ಥೆ Assembly of Experts ಆಯ್ಕೆ ಮಾಡಿತ್ತು.
