ಬೆಂಗಳೂರು: ಕರ್ನಾಟಕ ಮಾಧ್ಯಮ ಅಕಾಡೆಮಿ ವತಿಯಿಂದ ಇನ್ಫೋಸಿಸ್ (Infosys) ಸಿ.ಎಸ್.ಆರ್ ಕಾರ್ಯಕ್ರಮದಡಿ ಪತ್ರಕರ್ತೆಯರಿಗಾಗಿ ವಿಶೇಷ ತರಬೇತಿ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಅರ್ಹ ಪತ್ರಕರ್ತೆಯರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಮಾರ್ಚ್ 25 ರಿಂದ 27ರವರೆಗೆ ಮೈಸೂರಿನ ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ಮೂರು ದಿನಗಳ ವಸತಿಯುತ ತರಬೇತಿ ನಡೆಯಲಿದೆ. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಮಾಧ್ಯಮ ಪಟ್ಟಿಯಲ್ಲಿರುವ ಮಾಧ್ಯಮ ಸಂಸ್ಥೆಗಳಲ್ಲಿ ಕನಿಷ್ಠ ಐದು ವರ್ಷಗಳ ಸೇವಾನುಭವ ಹೊಂದಿರುವ ಪತ್ರಕರ್ತೆಯರು ಅರ್ಜಿ ಸಲ್ಲಿಸಲು ಅರ್ಹರಾಗಿದ್ದಾರೆ.

ಆಸಕ್ತ ಅಭ್ಯರ್ಥಿಗಳು ಗೂಗಲ್ ಫಾರ್ಮ್ https://forms.gle/tozr4GxUQibDHBvk9 ಮೂಲಕ ಅಗತ್ಯ ಮಾಹಿತಿಗಳೊಂದಿಗೆ ನೋಂದಣಿ ಮಾಡಿಕೊಳ್ಳಬೇಕಾಗಿದೆ. ಅರ್ಜಿ ಸಲ್ಲಿಸುವ ವೇಳೆ ಭಾವಚಿತ್ರ, ವಯಸ್ಸಿನ ಪ್ರಮಾಣಪತ್ರ, ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಮಾಧ್ಯಮ ಸಂಸ್ಥೆಯ ಮುಖ್ಯಸ್ಥರ ದೃಢೀಕರಣ ಪತ್ರ ಅಥವಾ ಅಧಿಕೃತ ಗುರುತಿನ ಚೀಟಿ, ಸಂಬಂಧಿತ ಮಾಧ್ಯಮ ಸಂಸ್ಥೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಮಾನ್ಯ ಪಟ್ಟಿಯಲ್ಲಿ ಸೇರಿರುವ ದಾಖಲೆ ಹಾಗೂ ಕನಿಷ್ಠ ಐದು ವರ್ಷದ ಸೇವಾನುಭವದ ದಾಖಲೆಯನ್ನು ಸಲ್ಲಿಸುವುದು ಕಡ್ಡಾಯವಾಗಿದೆ.

ಮೂರು ದಿನಗಳ ಈ ತರಬೇತಿ ಕಾರ್ಯಕ್ರಮದಲ್ಲಿ ಡಿಜಿಟಲ್ ಮಾಧ್ಯಮ ಬಳಕೆ, ಕೃತಕ ಬುದ್ಧಿಮತ್ತೆ (ಎಐ) ಉಪಯೋಗ, ಸಾಫ್ಟ್ ಸ್ಕಿಲ್ ಅಭಿವೃದ್ಧಿ ಹಾಗೂ ನಾಯಕತ್ವ ತರಬೇತಿ ನೀಡಲಾಗುತ್ತದೆ. ಭಾಗವಹಿಸುವ ಪತ್ರಕರ್ತೆಯರಿಗೆ ನಿಯಮಾನುಸಾರ ಪ್ರಯಾಣ ಭತ್ಯೆಯೂ ನೀಡಲಾಗುವುದು. ಪತ್ರಕರ್ತೆಯರ ಆಯ್ಕೆ ಕುರಿತ ಅಂತಿಮ ನಿರ್ಧಾರ ಕರ್ನಾಟಕ ಮಾಧ್ಯಮ ಅಕಾಡೆಮಿಯದ್ದೇ ಆಗಿರುತ್ತದೆ. ಅರ್ಜಿ ಸಲ್ಲಿಸಲು ಮಾರ್ಚ್ 10 ಕೊನೆಯ ದಿನವಾಗಿದೆ. ಆಸಕ್ತ ಪತ್ರಕರ್ತೆಯರು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳುವಂತೆ ಪ್ರಕಟಣೆ ತಿಳಿಸಿದೆ.