ಮಂಗಳೂರು: ಕಳೆದ ಐದು ದಶಕಗಳಿಂದ ಮೌಲ್ಯಾಧಾರಿತ ಶಿಕ್ಷಣ ನೀಡುತ್ತಾ ಬಂದಿರುವ ಕೆನರಾ ಕಾಲೇಜಿಗೆ ಈಗ ʻಸ್ವಾಯತ್ತತೆ’ (Autonomy) ಸಿಕ್ಕಿದ್ದು, 2025-26ನೇ ಸಾಲಿನಿಂದ ಈ ಹೊಸ ಬದಲಾವಣೆ ಜಾರಿಗೆ ಬರಲಿದೆ ಎಂದು ಸಂಸ್ಥೆಯ ಪ್ರಮುಖರು ಮಂಗಳೂರಿನ ಖಾಸಗಿ ಹೋಟೆಲ್‌ನಲ್ಲ ಕರೆದ ಪತ್ರಿಕಾಗೋಷ್ಠಿಯಲ್ಲಿ ಹರ್ಷ ವ್ಯಕ್ತಪಡಿಸಿದ್ದಾರೆ.


ಕೆನರಾ ಹೈಸ್ಕೂಲ್ ಅಸೋಸಿಯೇಷನ್ ಅಧ್ಯಕ್ಷರಾದ ಡಿ. ವಾಸುದೇವ ಕಾಮತ್ ಅವರು ಮಾತನಾಡಿ, “1973ರಲ್ಲಿ ಸ್ಥಾಪನೆಯಾದ ನಮ್ಮ ಕಾಲೇಜು ಇಂದು ಮಂಗಳೂರು ವಿಶ್ವವಿದ್ಯಾನಿಲಯ ವ್ಯಾಪ್ತಿಯಲ್ಲಿ ಅತ್ಯಂತ ಪ್ರಭಾವಿ ಶೈಕ್ಷಣಿಕ ಕೇಂದ್ರವಾಗಿ ಬೆಳೆದು ನಿಂತಿದೆ. ನಮಗೆ ಸಿಕ್ಕಿರುವ ಈ ಸ್ವಾಯತ್ತ ಸ್ಥಾನಮಾನವು ನಮ್ಮ ಗುಣಮಟ್ಟ ಮತ್ತು ಬದ್ಧತೆಗೆ ಸಿಕ್ಕ ಜಯ. NAAC ನಿಂದ 3.21 ಸಿ.ಜಿ.ಪಿ.ಎ ಮತ್ತು ʻಎ’ ಶ್ರೇಣಿ ಪಡೆದಿರುವುದು ನಮ್ಮ ಶೈಕ್ಷಣಿಕ ಗುಣಮಟ್ಟಕ್ಕೆ ಸಾಕ್ಷಿಯಾಗಿದೆ,” ಎಂದು ನುಡಿದರು.

ಗೌರವ ಕಾರ್ಯದರ್ಶಿ ಎಂ. ರಂಗನಾಥ ಭಟ್ ಅವರು ಮಾತನಾಡುತ್ತಾ, “ಇಂದಿನ ವೇಗವಾಗಿ ಬದಲಾಗುತ್ತಿರುವ ತಂತ್ರಜ್ಞಾನ ಮತ್ತು ಕೈಗಾರಿಕಾ ಕ್ಷೇತ್ರಕ್ಕೆ ತಕ್ಕಂತೆ ಪಠ್ಯಕ್ರಮವನ್ನು ನಾವೇ ರೂಪಿಸುವ ಮತ್ತು ಪರಿಷ್ಕರಿಸುವ ಅಧಿಕಾರ ಈಗ ನಮಗೆ ದೊರೆತಿದೆ. ಇದರಿಂದ ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಮತ್ತು ಉದ್ಯೋಗಾಧಾರಿತ ಶಿಕ್ಷಣವನ್ನು ನೀಡಲು ನಮಗೆ ಸಾಧ್ಯವಾಗುತ್ತದೆ. 135ಕ್ಕೂ ಹೆಚ್ಚು ವಿಶ್ವವಿದ್ಯಾನಿಲಯ ರ್‍ಯಾಂಕ್‌ಗಳನ್ನು ಪಡೆದಿರುವ ನಮ್ಮ ಇತಿಹಾಸಕ್ಕೆ ಈ ಸ್ವಾಯತ್ತತೆ ಹೊಸ ಶಕ್ತಿ ನೀಡಲಿದೆ” ಎಂದರು.

ಜತೆ ಕಾರ್ಯದರ್ಶಿ ಟಿ. ಗೋಪಾಲಕೃಷ್ಣ ಶೆಣೈ ಅವರು ಸಂಸ್ಥೆಯ ಭವಿಷ್ಯದ ಯೋಜನೆಗಳನ್ನು ಹಂಚಿಕೊಳ್ಳುತ್ತಾ, “ಮಾರುಕಟ್ಟೆಯ ಇಂದಿನ ಬೇಡಿಕೆಯನ್ನು ಗಮನದಲ್ಲಿಟ್ಟುಕೊಂಡು ನಾವು ಮೂರು ಹೊಸ ಪಠ್ಯಕ್ರಮಗಳನ್ನು ಪ್ರಾರಂಭಿಸಲು ಪ್ರಸ್ತಾವನೆ ಸಲ್ಲಿಸಿದ್ದೇವೆ. BBA in Logistics, BCA in Data Analytics, ಮತ್ತು B.Com in Business Data Analytics – ಈ ಕೋರ್ಸ್‌ಗಳು ಡೇಟಾ ಸೈನ್ಸ್ ಮತ್ತು ಮ್ಯಾನೇಜ್‌ಮೆಂಟ್ ಕ್ಷೇತ್ರಗಳಲ್ಲಿ ವಿದ್ಯಾರ್ಥಿಗಳಿಗೆ ಅಂತಾರಾಷ್ಟ್ರೀಯ ಮಟ್ಟದ ಉದ್ಯೋಗಗಳನ್ನು ತಂದುಕೊಡಲಿವೆ” ಎಂದು ಆಶಯ ವ್ಯಕ್ತಪಡಿಸಿದರು.

ಸಂಸ್ಥೆಯ ಸಂಚಾಲಕ ಹಾಗೂ ಕೋಶಾಧಿಕಾರಿ ಸಿಎ ಜಗನ್ನಾಥ ಕಾಮತ್ ಮಾತನಾಡಿ, “ನಮ್ಮ ಸಂಸ್ಥೆಯಲ್ಲಿ 1569 ವಿದ್ಯಾರ್ಥಿಗಳು ಮತ್ತು 85 ಅರ್ಹ ಉಪನ್ಯಾಸಕರು ಒಂದು ಕುಟುಂಬದಂತೆ ಕಾರ್ಯನಿರ್ವಹಿಸುತ್ತಿದ್ದಾರೆ. ವಿದೇಶಗಳಲ್ಲಿ ಮತ್ತು ಕಾರ್ಪೊರೇಟ್ ವಲಯದಲ್ಲಿ ಉನ್ನತ ಸ್ಥಾನದಲ್ಲಿರುವ ನಮ್ಮ ಹಳೆ ವಿದ್ಯಾರ್ಥಿಗಳು ಈ ಸ್ವಾಯತ್ತತೆಯ ಪಯಣದಲ್ಲಿ ನಮಗೆ ದೊಡ್ಡ ಬಲವಾಗಿದ್ದಾರೆ ಎಂದು ತಿಳಿಸಿದರು.

ಕೆನರಾ ವಿಕಾಸ್ ಕಾಲೇಜಿನ ಕೋ- ಆರ್ಡಿನೇಟರ್ ಬಸ್ತಿ ಪುರುಷೋತ್ತಮ ಶೆಣೈ ಮಾತನಾಡಿ, ಈ ಸಂಸ್ಥೆಯು, ಕೇವಲ ಕಳೆದ ಎರಡು ವರ್ಷಗಳಲ್ಲೇ ವಿಶ್ವವಿದ್ಯಾನಿಲಯ ಮಟ್ಟದಲ್ಲಿ 12 ರ್‍ಯಾಂಕ್ ಗಳನ್ನು ಬಾಚಿಕೊಳ್ಳುವ ಮೂಲಕ ತನ್ನ ಅದ್ಭುತ ಸಾಧನೆಯನ್ನು ರುಜುವಾತುಪಡಿಸಿದೆ. ವಿಶೇಷವಾಗಿ ಸಂಸ್ಥೆಯ ಆಧಾರಸ್ತಂಭಗಳಾಗಿರುವ ಬಿಸಿಎ (BCA) ಮತ್ತು ಎಂಸಿಎ (MCA) ವಿಭಾಗಗಳ ಮೂಲಕ ತಾಂತ್ರಿಕ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತಿದ್ದು, ಗುಣಮಟ್ಟದ ಬೋಧನೆ ಮತ್ತು ಕೈಗಾರಿಕಾ ಆಧಾರಿತ ಪಠ್ಯಕ್ರಮದ ಮೂಲಕ ವಿದ್ಯಾರ್ಥಿಗಳನ್ನು ಜಾಗತಿಕ ಸ್ಪರ್ಧೆಗೆ ಸಜ್ಜುಗೊಳಿಸುವುದು ಕಾಲೇಜಿನ ಪ್ರಮುಖ ಗುರಿಯಾಗಿದೆ ಎಂದು ನುಡಿದರು.
ಕೋಶಾಧಿಕಾರಿ ಸಿಎ ಎಂ ವಾಮನ್ ಕಾಮತ್, ಕೆನರಾ ವಿಕಾಸ್ ಕಾಲೇಜಿನ ಕೋ- ಆರ್ಡಿನೇಟರ್ ಬಸ್ತಿ ಪುರುಷೋತ್ತಮ ಶೆಣೈ, ಪ್ರಾಂಶುಪಾಲೆ ಡಾ. ಪ್ರೇಮಲತಾ ವಿ ಉಪಸ್ಥಿತರಿದ್ದರು.
