ಮಾ.8-ಸಸಿಹಿತ್ಲು ಶ್ರೀ ಭಗವತಿ ದೇವಸ್ಥಾನದ ಬ್ರಹ್ಮಕಲಶೋತ್ಸವ: ವಿವಿಧ ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಗಂಗಾರತಿ!

ಸುರತ್ಕಲ್: ಇಲ್ಲಿನ ಸಸಿಹಿತ್ಲು ಶ್ರೀ ಭಗವತಿ ದೇವಸ್ಥಾನದ ಇತಿಹಾಸದಲ್ಲಿ ಸುವರ್ಣಾಕ್ಷರಗಳಲ್ಲಿ ಬರೆಯಲ್ಪಡುವ ಬ್ರಹ್ಮಕಲಶೋತ್ಸವವು ದಿನಾಂಕ ಮಾರ್ಚ್ 8ರಂದು ಬೆಳಿಗ್ಗೆ 11.15 ರ ವೃಷಭ ಲಗ್ನ ಸುಮುಹೂರ್ತದಲ್ಲಿ ವಿವಿಧ ಧಾರ್ಮಿಕ ವಿಧಿವಿಧಾನಗಳೊಂದಿಗೆ ಅತ್ಯಂತ ವೈಭವದಿಂದ ನೆರವೇರಲಿದೆ ಎಂದು ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ, ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಮಾಹಿತಿ ನೀಡಿದರು.

ದೇವಸ್ಥಾನದ ಪ್ರಾಂಗಣದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಮಹತ್ಕಾರ್ಯವು ವೇದಮೂರ್ತಿ ಶ್ರೀ ವೆಂಕಟೇಶ ತಂತ್ರಿ ಎಡಪದವು ಇವರ ಮಾರ್ಗದರ್ಶನದಲ್ಲಿ ಹಾಗೂ ವಿದ್ವಾನ್ ವೇದಮೂರ್ತಿ ಶ್ರೀ ಕೃಷ್ಣಮೂರ್ತಿ ಭಟ್ ಹೊಯ್ಗೆಗುಡ್ಡೆ ಮತ್ತು ಶ್ರೀ ಶ್ರೀಪತಿ ಭಟ್ ಹೊಯ್ಗೆಗುಡ್ಡೆ ಅವರ ನೇತೃತ್ವದಲ್ಲಿ ನೆರವೇರಲಿದೆ ಎಂದರು.

ಅಭಿವೃದ್ಧಿ ಮತ್ತು ಸೌಲಭ್ಯಗಳು:
ಈ ಬಾರಿಯ ಬ್ರಹ್ಮಕಲಶೋತ್ಸವಕ್ಕಾಗಿ ದೇವಸ್ಥಾನದಲ್ಲಿ ಕೋಟ್ಯಂತರ ರೂಪಾಯಿ ವೆಚ್ಚದ ಅಭಿವೃದ್ಧಿ ಕಾರ್ಯಗಳು ಪೂರ್ಣಗೊಂಡಿವೆ. ಎರಡು ಪ್ರಧಾನ ಗೋಪುರಗಳ ಪುನರ್ ನವೀಕರಣ, ಗರ್ಭಗುಡಿಗೆ ಬೆಳ್ಳಿ ಹಾಗೂ ತಾಮ್ರದ ಹೊದಿಕೆ ಮತ್ತು ಸುಂದರ ಶಿಲ್ಪಕಲಾಕೃತಿಗಳ ರಚನೆಯೊಂದಿಗೆ ಕ್ಷೇತ್ರವು ನವವಧುವಿನಂತೆ ಕಂಗೊಳಿಸುತ್ತಿದೆ. ಭಕ್ತರ ಅನುಕೂಲಕ್ಕಾಗಿ 10 ಎಕರೆ ವಿಸ್ತೀರ್ಣದ ಪಾರ್ಕಿಂಗ್, ಅಶಕ್ತರಿಗೆ ಇವಿ ವಾಹನ ಸೌಲಭ್ಯ ಹಾಗೂ ಪ್ಲಾಸ್ಟಿಕ್ ಮುಕ್ತ ಪರಿಸರದಲ್ಲಿ ನಿರಂತರ ಅನ್ನಸಂತರ್ಪಣೆಯ ವ್ಯವಸ್ಥೆ ಮಾಡಲಾಗಿದೆ ಎಂದರು.

ವಿಶೇಷ ಆಕರ್ಷಣೆ: ಕಾಶಿ ಮಾದರಿಯ ಭವ್ಯ ‘ಗಂಗಾರತಿ’!

ಬ್ರಹ್ಮಕಲಶೋತ್ಸವದ ನಿಮಿತ್ತ ಮಾರ್ಚ್ 8ರಂದು ಸಂಜೆ ಸಸಿಹಿತ್ಲು ಸಮುದ್ರ ತೀರದಲ್ಲಿ ಕಾಶಿಯ ಗಂಗಾರತಿಯ ಮಾದರಿಯಲ್ಲೇ ಭವ್ಯ ‘ಸಮುದ್ರ ಆರತಿ’ (ಕಡಲ ಮಾತೆಗೆ ಗಂಗಾರತಿ) ನಡೆಯಲಿದೆ. ಚಕ್ರವರ್ತಿ ಸೂಲಿಬೆಲೆಯವರ ಮಾರ್ಗದರ್ಶನದಲ್ಲಿ ನಡೆಯುವ ಈ ಸಾಮೂಹಿಕ ಆರಾಧನೆಯಲ್ಲಿ ನೂರಾರು ಅರ್ಚಕರು ಏಕಕಾಲದಲ್ಲಿ ಕಡಲ ಮಾತೆಗೆ ದೀಪಾರತಿ ಬೆಳಗಲಿದ್ದಾರೆ. ಕರಾವಳಿಯ ಇತಿಹಾಸದಲ್ಲೇ ಅತ್ಯಂತ ಅಪರೂಪದ ಈ ಕ್ಷಣಕ್ಕೆ ಸಾಕ್ಷಿಯಾಗಲು ಸಾವಿರಾರು ಭಕ್ತರು ಆಗಮಿಸುವ ನಿರೀಕ್ಷೆಯಿದೆ ಎಂದು ನಳಿನ್ ಕುಮಾರ್ ಹೇಳಿದರು.

ಮಾರ್ಚ್ 4ರಂದು ಭವ್ಯ ಹೊರೆಕಾಣಿಕೆ ಮೆರವಣಿಗೆಯೊಂದಿಗೆ ಕಾರ್ಯಕ್ರಮಗಳು ಚಾಲನೆ ಪಡೆಯಲಿದ್ದು, ಮಾರ್ಚ್ 6ರಂದು ಆಯುತ ಕದಳಿ ಯಾಗ ಹಾಗೂ ಸಾಮೂಹಿಕ ಕುಂಕುಮಾರ್ಚನೆ ನಡೆಯಲಿದೆ.

ಕ್ಷೇತ್ರ ಪರಿಚಯ ಮತ್ತು ಹಿನ್ನೆಲೆ:
ಈ ಬಗ್ಗೆ ಮಾತಾಡಿದ ಬ್ರಹ್ಮಕಲಶೋತ್ಸವ ಸಮಿತಿಯ ಕಾರ್ಯಾಧ್ಯಕ್ಷ ವಾಮನ ಇಡ್ಯಾ ಅವರು, ದಾರಿಕಾಸುರ ಎಂಬ ದಾನವನ ವಧೆಗಾಗಿ ಪರಶಿವನ ನೇತ್ರಾಗ್ನಿಯಿಂದ (ಮೂರನೇ ಕಣ್ಣು) ಭಗವತಿಯು ಜನ್ಮ ತಾಳಿದಳು. ಭಗವತಿಯು ಉಗ್ರ ರೂಪದ ಭದ್ರಕಾಳಿಯಾಗಿ ಅವತರಿಸಿದಳು. ಭಗವಂತನ ನಿರ್ದೇಶನದಂತೆ, ದೇವಿಯು ಘಂಟಾಕರ್ಣ ಮತ್ತು ಸಾವಿರದ ಒಂದು ಶಕ್ತಿಗಳೊಂದಿಗೆ ಸೇರಿ ದಾರಿಕಾಸುರನನ್ನು ಸಂಹರಿಸಿ ಲೋಕ ಕಲ್ಯಾಣ ಮಾಡಿದಳು. ಶಿವನ ಸಲಹೆಯಂತೆ ಭಕ್ತರನ್ನು ಉದ್ಧರಿಸಲು ದೇವಿಯು ಭೂಮಿಗೆ ಬರಲು ನಿರ್ಧರಿಸಿದಳು. ಕೊಡಂಗಲ್ಲೂರು (ಕೇರಳ) ಮೂಲಕ ಕಾಶರಗೋಡಿನ ತಲಂಗರೆಗೆ ಬಂದು, ಅಲ್ಲಿಂದ ಕರ್ನಾಟಕದ ಕರಾವಳಿ ತೀರಕ್ಕೆ ಬಂದಳು ಎಂದು ಹೇಳಲಾಗುತ್ತದೆ. ದೇವಿಯು ಸಮುದ್ರ ಮಾರ್ಗವಾಗಿ ಸಸಿಹಿತ್ಲಿಗೆ ಬಂದಾಗ, ಅಲ್ಲಿನ ಪ್ರಕೃತಿ ಸೌಂದರ್ಯಕ್ಕೆ ಮಾರುಹೋದಳು. ದಾಹವಾದಾಗ ಅಲ್ಲಿನ ಭಕ್ತರು ನೀಡಿದ ಎಳನೀರನ್ನು ಕುಡಿದು ತೃಪ್ತಳಾಗಿ, ಭಕ್ತರ ಶ್ರದ್ಧೆಗೆ ಮೆಚ್ಚಿ ಅಲ್ಲೇ ನೆಲೆ ನಿಂತಳು ಎಂಬುದು ಇಲ್ಲಿನ ನಂಬಿಕೆ ಇದೆ ಎಂದರು.

ಈ ಕ್ಷೇತ್ರದ ಪ್ರಾಚೀನತೆಗೆ ಐತಿಹಾಸಿಕ ಪುರಾವೆಗಳೂ ಲಭ್ಯವಿದ್ದು, 10ನೇ ಶತಮಾನದ ಪಂಪನ ಸಾಹಿತ್ಯದಲ್ಲಿ ದೇವಿಯ ಆರಾಧನೆಯ ಉಲ್ಲೇಖವಿದೆ. 1305ರ ನಂದನೇಶ್ವರ ದೇವಸ್ಥಾನದ ಶಾಸನದಲ್ಲಿ ‘ಸಸಿಹಿತ್ಲು’ ಎಂಬ ಹೆಸರು ದಾಖಲಾಗಿದ್ದು, ಇದು ಕ್ಷೇತ್ರದ ಪುರಾತನ ಇತಿಹಾಸವನ್ನು ಪುಷ್ಟೀಕರಿಸುತ್ತದೆ. ಶಿಲಪ್ಪದಿಕ್ಕಾರಂ ಮತ್ತು ಮಣಿ ಮೇಖಲೈ ಅಂತಹ ದಕ್ಷಿಣದ ಮಹಾಕಾವ್ಯಗಳಲ್ಲೂ ಭಗವತಿಯ ಚರಿತ್ರೆಯ ಉಲ್ಲೇಖವಿದ್ದು, ಇಂದು ಅರಬೀ ಸಮುದ್ರದ ತಟದಲ್ಲಿರುವ ಈ ಕ್ಷೇತ್ರವು ಅಸಂಖ್ಯಾತ ಭಕ್ತರ ಶ್ರದ್ಧಾ ಕೇಂದ್ರವಾಗಿ ಬೆಳಗುತ್ತಿದೆ ಎಂದರು.

ದೇವಸ್ಥಾನದ ಪ್ರಧಾನ ಅರ್ಚಕರು, ಅನುವಂಶಿಕ ಮೊಕ್ತೇಸರರಾದ ಶ್ರೀನಿವಾಸ ಯಾನೆ ಅಪ್ಪು ಪೂಜಾರಿ, ಗಂಪಮನೆ ಕಟೀಲು ಆಡಳಿತ ಮೊಕ್ತೇಸರ ಚಂದ್ರಶೇಖರ ಬೆಳ್ಚಡ ಆಡಳಿತ ಸಮಿತಿ ಮತ್ತು ಬ್ರಹ್ಮಕಲಶೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ರಮೇಶ ಬಂಗೇರ ಕರಿತೋಟ, ಮಾತೃ ಮಂಡಳಿ ಅಧ್ಯಕ್ಷೆ ಕಸ್ತೂರಿ ಪಂಜ, ಸ್ವಯಂಸೇವಕರ ಸಮಿತಿಯ ಸಂಚಾಲಕ ವಿನೋದ್ ಸಾಲಿಯಾನ್ ಬೆಳ್ಳಾಯರು ಮತ್ತಿತರರು ಉಪಸ್ಥಿತರಿದ್ದರು.

error: Content is protected !!