ಎಲ್ ಆಲ್ಟೊ: ಬೊಲಿವಿಯಾದ ಸೆಂಟ್ರಲ್ ಬ್ಯಾಂಕ್‌ನಿಂದ ಹೊಸದಾಗಿ ಮುದ್ರಿತ ನೋಟುಗಳನ್ನು ಹೊತ್ತೊಯ್ಯುತ್ತಿದ್ದ ವಾಯುಪಡೆಯ ಹರ್ಕ್ಯುಲಸ್ ವಿಮಾನವು ಎಲ್ ಆಲ್ಟೊದಲ್ಲಿ ಶುಕ್ರವಾರ(ಫೆ.27) ಸಂಜೆ ಜನನಿಬಿಡ ರಸ್ತೆಗೆ ಅಪ್ಪಳಿಸಿದ ಪರಿಣಾಮ ಸುಮಾರು 15 ಮಂದಿ ಸಾವನ್ನಪ್ಪಿದ್ದು, 30ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿರುವ ಭೀಕರ ಘಟನೆ ಸಂಭವಿಸಿದೆ.


ಸೇನಾ ವಿಮಾನವು ಟೇಕ್ ಆಫ್ ಆದ ಸ್ವಲ್ಪ ಸಮಯದ ನಂತರ ಪತನಗೊಂಡಿದ್ದು, ಎಲ್ ಆಲ್ಟೊ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಪಕ್ಕದಲ್ಲಿರುವ ಜನನಿಬಿಡ ಪ್ರದೇಶದಲ್ಲಿ ಪತನವಾಗಿದೆ.
ತುರ್ತು ಸೇವೆ ತಂಡಗಳು ಸ್ಥಳಕ್ಕೆ ಧಾವಿಸುವಷ್ಟರಲ್ಲೇ ಕೆಲವರು ಮೃತಪಟ್ಟಿದ್ದರು. ಹಲವಾರು ವಾಹನಗಳು ಹಾನಿಗೊಳಗಾಗಿವೆ ಎಂದು ಸುದ್ದಿ ಸಂಸ್ಥೆ ರಾಯಿಟರ್ಸ್ ವರದಿ ಮಾಡಿದೆ.

ವಿಮಾನದಲ್ಲಿದ್ದ ಸಿಬ್ಬಂದಿಗಳು ಮತ್ತು ನೆಲದ ಮೇಲಿದ್ದ ನಾಗರಿಕರು ಮೃತರಲ್ಲಿ ಸೇರಿದ್ದಾರೆ ಎಂದು ಸ್ಥಳೀಯ ಅಧಿಕಾರಿಗಳು ದೃಢಪಡಿಸಿದ್ದಾರೆ. ಗಾಯಾಳುಗಳನ್ನು ಹತ್ತಿರದ ಆಸ್ಪತ್ರೆಗಳಿಗೆ ಸಾಗಿಸಲಾಗಿದ್ದು, ಕೆಲವರ ಸ್ಥಿತಿ ಚಿಂತಾಜನಕವಾಗಿದೆ ಎಂದು ವರದಿಯಾಗಿದೆ.