ಲಕ್ನೋ: ಅದು ಲಕ್ನೋದ ಆಶಿಯಾನಾದ ಸೆಕ್ಟರ್ ಎಲ್. ಮನೆ ಸಂಖ್ಯೆ 91. ಹೊರಗಿನಿಂದ ನೋಡಿದರೆ ಅದೊಂದು ಸುಂದರ ಗೂಡು. ಆದರೆ ಫೆಬ್ರವರಿ 20ರ ಆ ರಾತ್ರಿ, ಆ ಮನೆಯ ನಾಲ್ಕು ಗೋಡೆಗಳ ಮಧ್ಯೆ ನಡೆದಿದ್ದು ಮಾತ್ರ ಮನುಷ್ಯಕುಲವೇ ತಲೆತಗ್ಗಿಸುವಂತಹ ನರಮೇಧ.

49 ವರ್ಷದ ಮನ್ವೇಂದ್ರ ಸಿಂಗ್‌ಗೆ ಮಗನ ಮೇಲೆ ಅತೀವ ಆಸೆ ಇತ್ತು. ತಾವು ಔಷಧ ಮತ್ತು ಮದ್ಯದ ವ್ಯವಹಾರದಲ್ಲಿ ಏನೇ ಸಾಧಿಸಿದ್ದರೂ, ಮಗ ಅಕ್ಷತ್ ಪ್ರತಾಪ್ ಸಿಂಗ್ ಒಬ್ಬ ದೊಡ್ಡ ವೈದ್ಯನಾಗಬೇಕು, ʻನೀಟ್’ ಪರೀಕ್ಷೆ ಪಾಸ್ ಮಾಡಬೇಕು ಅನ್ನೋದು ಆ ತಂದೆಯ ಹಠವಾಗಿತ್ತು. ಆದರೆ ಬಿ.ಕಾಂ ಓದುತ್ತಿದ್ದ ಮಗನಿಗೆ ಅಪ್ಪನ ಈ ಒತ್ತಡ ಉರುಳಾಗುತ್ತದೆ ಎಂದು ಯಾರೂ ಭಾವಿಸಿರಲಿಲ್ಲ. ಅಪ್ಪ ಬೈಯುತ್ತಿದ್ದರು, ಓದು ಎಂದು ಪೀಡಿಸುತ್ತಿದ್ದರು ಎಂಬ ಕ್ಷುಲ್ಲಕ ಕಾರಣಕ್ಕೆ ಆ ಮಗ ಅಕ್ಷತ್ ಅಕ್ಷರಶಃ ರಾಕ್ಷಸನಾಗಿ ಬದಲಾಗಿದ್ದ!

ಒಂದೇ ಒಂದು ಗುಂಡು.. ಹರಿದ ನೆತ್ತರು!
ಜಗಳ ವಿಕೋಪಕ್ಕೆ ಹೋದಾಗ ಆವೇಶದಲ್ಲಿ ಅಕ್ಷತ್ ಕೈಗೆತ್ತಿಕೊಂಡಿದ್ದು ರೈಫಲ್. ಅಪ್ಪನ ಎದೆಗೆ ಗುಂಡಿಕ್ಕಿದಾಗ ರಕ್ತದ ಕೋಡಿ ಹರಿಯಿತು. ಮನ್ವೇಂದ್ರ ಸಿಂಗ್ ಅಲ್ಲೇ ಕುಸಿದು ಬಿದ್ದರು. ಆದರೆ ಕಥೆ ಇಲ್ಲಿಗೆ ಮುಗಿಯಲಿಲ್ಲ. ಸತ್ತ ಮೇಲೂ ಅಕ್ಷತ್‌ಗೆ ಅಪ್ಪನ ಮೇಲೆ ಕರುಣೆ ಬರಲಿಲ್ಲ. ಆ ಶವವನ್ನು ಕಟುಕನಂತೆ ತುಂಡು ತುಂಡಾಗಿ ಕತ್ತರಿಸಿದ. ಸಾಕ್ಷ್ಯ ನಾಶಪಡಿಸಲು ಅಪ್ಪನ ದೇಹದ ಭಾಗಗಳನ್ನು ಹೊತ್ತುಕೊಂಡು ಹೋಗಿ ಹಳ್ಳಿಯೊಂದರ ಬಳಿ ಎಸೆದು ಬಂದ. ಇನ್ನುಳಿದ ಭಾಗಗಳನ್ನು ಮನೆಯಲ್ಲಿದ್ದ ಪ್ಲಾಸ್ಟಿಕ್ ಡ್ರಮ್ (ಬ್ಯಾರೆಲ್) ಒಳಗೆ ತುಂಬಿಸಿ ಯಾರಿಗೂ ತಿಳಿಯದಂತೆ ಬಚ್ಚಿಟ್ಟಿದ್ದ.
ತಂದೆ ನಾಪತ್ತೆಯಾಗಿದ್ದಾರೆ ಎಂದು ನಾಟಕವಾಡಿದ ಅಕ್ಷತ್, ಮನೆಯಲ್ಲಿದ್ದ ತನ್ನ ತಂಗಿಯನ್ನೂ ಬೆದರಿಸಿದ್ದ. ಆಕೆ ಬಾಯಿ ಬಿಡದಂತೆ ಬೆದರಿಕೆ ಹಾಕಿದ್ದ. ತಾಯಿ ಊರಿಗೆ ಹೋದ ಸಮಯವನ್ನೇ ನೋಡಿ ಈ ಅಘಾತಕಾರಿ ಕೃತ್ಯ ಎಸಗಲಾಗಿತ್ತು. ಆದರೆ ಪೊಲೀಸರು ಮನೆಗೆ ನುಗ್ಗಿ ತಪಾಸಣೆ ನಡೆಸಿದಾಗ ಆ ಡ್ರಮ್ ತೆರೆದ ಪೊಲೀಸರೇ ಬೆಚ್ಚಿಬಿದ್ದಿದ್ದರು. ಅಲ್ಲಿ ಮನ್ವೇಂದ್ರ ಸಿಂಗ್ ಅವರ ದೇಹದ ಭಾಗಗಳು ರಕ್ತಸಿಕ್ತವಾಗಿ ಬಿದ್ದಿದ್ದವು!
ಮಕ್ಕಳು ಚೆನ್ನಾಗಿ ಓದಲಿ ಅಂದುಕೊಳ್ಳುವುದು ಪ್ರತಿಯೊಬ್ಬ ಪೋಷಕರ ಹಂಬಲ. ಆದರೆ ಆ ಹಂಬಲವೇ ಇಂದು ಒಬ್ಬ ತಂದೆಯ ಪ್ರಾಣ ಪಡೆದಿದೆ. ಲಕ್ನೋದ ಈ ಘಟನೆ ಇಡೀ ಸಮಾಜಕ್ಕೆ ಒಂದು ಕಹಿಯಾದ ಎಚ್ಚರಿಕೆ.
