ಉಡುಪಿ: ಕಟಪಾಡಿಯ ಏಣಗುಡ್ಡೆಯ ಆ ಬಾಡಿಗೆ ಮನೆಯ ಮೂಲೆಯಲ್ಲಿ ಕುಳಿತು ಬಿಕ್ಕಿ ಬಿಕ್ಕಿ ಅಳುತ್ತಿರುವ ಆ ತಂದೆ-ತಾಯಿಯ ಕಣ್ಣೀರಿಗೆ ಉತ್ತರವಿಲ್ಲ. ಮೂಲತಃ ಬಿಜಾಪುರದ ಬಸವನ ಬಾಗೇವಾಡಿಯಿಂದ ಬದುಕು ಅರಸಿ ಬಂದಿದ್ದ ಆ ಕುಟುಂಬಕ್ಕೆ, ತಮ್ಮ ಮಗಳು ದೀಪಾ ಇಂತಹದೊಂದು ಆಘಾತ ನೀಡುತ್ತಾಳೆ ಎಂದು ಕನಸಿನಲ್ಲೂ ಎಣಿಸಿರಲಿಲ್ಲ.

ನಗರದ ಕಾಲೇಜೊಂದರಲ್ಲಿ ದ್ವಿತೀಯ ಪಿಯುಸಿ ಓದುತ್ತಿದ್ದ ಆ ಹುಡುಗಿ ಹೆಸರು ದೀಪಾ ಲಮಾಣಿ. ಅಂದು ಈಕೆ ಕಾಲೇಜಿಗೆ ರಜೆ ಹಾಕಿದ್ದವಳು ಯಾವುದೋ ಒಂದು ನಿರ್ಧಾರಕ್ಕೆ ಬಂದವಳಂತೆ ಮನೆಯಿಂದ ಹೊರನಡೆದಳು. ಹೋದವಳು ಹೋದದ್ದೇ… ನಿಮಿಷಗಳು ಗಂಟೆಗಳಾದವು, ಗಂಟೆಗಳು ದಿನಗಳಾದವು. ಆದರೆ ದೀಪಾ ಮಾತ್ರ ಮರಳಿ ಬರಲಿಲ್ಲ.

ಐದಡಿ ಆರು ಇಂಚಿನ ಎತ್ತರ, ಗೋಧಿ ಮೈಬಣ್ಣದ ಸಪೂರ ಶರೀರ. ಕನ್ನಡ, ಲಂಬಾಣಿ ಮತ್ತು ಹಿಂದಿ ಭಾಷೆಯಲ್ಲಿ ಸರಾಗವಾಗಿ ಮಾತಾಡುವ ಆ ಪ್ರತಿಭಾವಂತ ವಿದ್ಯಾರ್ಥಿನಿ ಈಗ ಎಲ್ಲಿದ್ದಾಳೆ? ಯಾರೋ ಪುಸಲಾಯಿಸಿ ಕರೆದೊಯ್ದರಾ? ಅಥವಾ ತನ್ನದಲ್ಲದ ದಾರಿಯಲ್ಲಿ ಅವಳೇ ಹೆಜ್ಜೆ ಹಾಕಿದಳಾ? ಕಾಪು ಪೊಲೀಸರ ಫೈಲ್‌ನಲ್ಲಿ ಈಗ ಈಕೆಯ ನಾಪತ್ತೆ ಪ್ರಕರಣ ನಿಗೂಢವಾಗಿ ದಾಖಲಾಗಿದೆ.
ಒಂದು ವೇಳೆ ಈ ಹುಡುಗಿ ನಿಮ್ಮ ಕಣ್ಣಿಗೆ ಬಿದ್ದರೆ, ಅಥವಾ ಆಕೆಯ ಬಗ್ಗೆ ಯಾವುದಾದರೂ ಸಣ್ಣ ಮಾಹಿತಿ ನಿಮ್ಮ ಬಳಿ ಇದ್ದರೆ ತಡಮಾಡಬೇಡಿ. ಆ ತಂದೆ-ತಾಯಿಯ ಕಣ್ಣೀರೊರೆಸುವ ಜವಾಬ್ದಾರಿ ನಿಮ್ಮ ಮೇಲಿದೆ. ಕೂಡಲೇ ಕಾಪು ಪೊಲೀಸರನ್ನು ಅಥವಾ 9480805431 ಸಂಖ್ಯೆಯನ್ನು ಸಂಪರ್ಕಿಸುವಂತೆ ಪೊಲೀಸರು ಮನವಿ ಮಾಡಿದ್ದಾರೆ.
