ಕಾರ್ಕಳ: ಕಿಸಾನ್ ಸಭಾ ಟ್ರಸ್ಟ್ ವತಿಯಿಂದ ನಿರ್ಮಿಸಲಾದ “ಕಿಸಾನ್ ಸಭಾ” ಸಭಾಂಗಣದ ಉದ್ಘಾಟನೆ ಹಾಗೂ ಕುಕ್ಕುಂದೂರಿನ ಮಹಾತ್ಮ ಗಾಂಧಿ ವಸತಿ ಪ್ರೌಢಶಾಲೆಯ 35ನೇ ವರ್ಷದ ಸಂಭ್ರಮೋತ್ಸವಕ್ಕೆ ಫೆ. 25ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಲಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಡಾ.ಎಂ.ವೀರಪ್ಪ ಮೊಯ್ಲಿ ತಿಳಿಸಿದರು.

ಸೋಮವಾರ ಕಾರ್ಕಳದ ಕುಕ್ಕುಂದೂರಿನ ಮಹಾತ್ಮ ಗಾಂಧಿ ವಸತಿ ಪ್ರೌಢ ಶಾಲೆಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಮುಖ್ಯಮಂತ್ರಿ ಭೇಟಿ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದರು.
1968ರಲ್ಲಿ ಅಸ್ಪಶ್ಯತೆ ಮತ್ತು ಸಾಮಾ ಜಿಕ ಅನ್ಯಾಯದ ವಿರುದ್ಧ ಹೋರಾಡಲು ಆರಂಭ ವಾದ “ಕಿಸಾನ್ ಸಭಾ’ ಸಂಸ್ಥೆಯು, 1992ರಲ್ಲಿ ಟ್ರಸ್ಟ್ ಆಗಿ ನೋಂದಾಯಿಸಲ್ಪಟ್ಟಿತು. ಶೈಕ್ಷಣಿಕವಾಗಿ ಹಿಂದುಳಿದ ಗ್ರಾಮೀಣ ಮಕ್ಕಳಿಗೆ ಉಚಿತ ಊಟ, ವಸತಿ ಮತ್ತು ಶಿಕ್ಷಣ ನೀಡುವುದು ಈ ಸಂಸ್ಥೆಯ ಮುಖ್ಯ ಉದ್ದೇಶ. ಪ್ರಸ್ತುತ ಮಹಾತ್ಮ ಗಾಂಧಿ ವಸತಿ ಪ್ರೌಢಶಾಲೆಯಲ್ಲಿ ಎಲ್ಲ ವರ್ಗದ 103 ಬಡ ವಿದ್ಯಾರ್ಥಿಗಳು ಯಾವುದೇ ಶುಲ್ಕವಿಲ್ಲದೆ ಗುಣಮಟ್ಟದ ಶಿಕ್ಷಣ ಪಡೆಯುತ್ತಿದ್ದಾರೆ ಎಂದು ಮೊಯ್ಲಿ ವಿವರಿಸಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಶಿಕ್ಷಣ ಸಚಿವ ಮಧು ಬಂಗಾರಪ್ಪ, ಸಮಾಜ ಕಲ್ಯಾಣ ಇಲಾಖೆ ಸಚಿವ ಎಚ್.ಸಿ. ಮಹಾದೇವಪ್ಪ, ವಿ. ಸುನಿಲ್ ಕುಮಾರ್, ಎಸ್‌ಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ. ಎಂ. ಎನ್. ರಾಜೇಂದ್ರ ಕುಮಾರ್, ಕಾಂಗ್ರೆಸ್ ನಾಯಕ ಮುನಿಯಾಲು ಉದಯ್ ಕುಮಾರ್ ಶೆಟ್ಟಿ ಮೊದಲಾದವರು ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.

ಶ್ರೀ ನಾರಾಯಣಗುರು ಅಭಿವೃದ್ಧಿ ನಿಗಮದ ಅಧ್ಯಕ್ಷ ಮಂಜುನಾಥ್ ಪೂಜಾರಿ, ಕಿಸಾನ್ ಸಭಾ ಟ್ರಸ್ಟ್ ಅಧ್ಯಕ್ಷ ಹರ್ಷ ಮೊಯ್ಲಿ, ಕಾಂಗ್ರೆಸ್ ಮುಖಂಡ ಮುನಿಯಾಲು ಉದಯ್ ಶೆಟ್ಟಿ, ಕಾಂಗ್ರೆಸ್ ವಕ್ತಾರ ಬಿಪಿನ್ ಚಂದ್ರಪಾಲ್ ನಕ್ರೆ, ಕಾರ್ಕಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶುಭಧ ರಾವ್, ಪ್ರಮುಖರಾದ ಬಿ. ಭಾಸ್ಕರ್‌ರಾವ್, ರವಿಕಿರಣ್ ಜೈನ್, ನೀರೆ ಕೃಷ್ಣ ಶೆಟ್ಟಿ, ಬಜಗೋಳಿ ಉಮೇಶ್ ರಾವ್, ಅಶೋಕ್ ಕುಮಾರ್ ಜೈನ್, ಎಂ.ಸಿ. ಆಚಾರ್, ಕಿಸಾನ್ ಸಭಾ ಟ್ರಸ್ಟ್‌ನ ಬಿ. ಕೃಷ್ಣಮೂರ್ತಿ, ಹೆಬ್ರಿ ಎಸ್.ಆರ್. ಕಾಲೇಜಿನ ನಾಗರಾಜ ಶೆಟ್ಟಿ ಪತ್ರಿಕಾಗೋಷ್ಠಿಯಲ್ಲಿದ್ದರು.