ದೆಹಲಿಗೆ ತೆರಳುತ್ತಿದ್ದ ಏರ್ ಆಂಬುಲೆನ್ಸ್‌ ‘ಬೀಚ್‌ಕ್ರಾಫ್ಟ್‌ ಸಿ90’ ಪತನ: ಏಳು ಮಂದಿ ಸಾವು

ಜಾರ್ಖಂಡ್‌: ರಾಂಚಿಯಿಂದ ದೆಹಲಿಗೆ ತೆರಳುತ್ತಿದ್ದ ಏರ್ ಆಂಬ್ಯುಲೆನ್ಸ್ ‘ಬೀಚ್‌ಕ್ರಾಫ್ಟ್‌ ಸಿ90’ ವಿಮಾನವು ಜಾರ್ಖಂಡ್‌ನ ಛಾತ್ರಾ ಜಿಲ್ಲೆಯ ಸಿಮಾರಿಯಾ ಬಳಿಯ ಕಾಡಿನಲ್ಲಿ ಸೋಮವಾರ(ಫೆ.24) ಪತನಗೊಂಡಿದ್ದು, ಅದರಲ್ಲಿದ್ದ 7 ಮಂದಿ ಮೃತಪಟ್ಟಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ರೆಡ್‌ಬರ್ಡ್‌ ಏರ್ವೇಸ್ ಪ್ರೈವೆಟ್ ಲಿಮಿಟೆಡ್ ಎಂಬ ಸಂಸ್ಥೆ ನಿರ್ವಹಣೆ ಮಾಡುತ್ತಿದ್ದ ವಿಮಾನ, ರಾಂಚಿ ವಿಮಾನ ನಿಲ್ದಾಣದಿಂದ ಸಂಜೆ 7.11ಕ್ಕೆ ಟೇಕ್‌ ಆಫ್‌ ಆಗಿದ್ದು, ಸುಮಾರು 20 ನಿಮಿಷಗಳ ನಂತರ ವಾಯು ಸಂಚಾರ ನಿಯಂತ್ರಣದೊಂದಿಗೆ ಸಂಪರ್ಕ ಕಳೆದುಕೊಂಡು ಪತನಗೊಂಡಿದೆ.

ಕ್ಯಾಪ್ಟನ್ ವಿವೇಕ್ ವಿಕಾಸ್ ಭಗತ್, ಕ್ಯಾಪ್ಟನ್ ಸವ್ರಜ್‌ದೀಪ್ ಸಿಂಗ್, ರೋಗಿ ಸಂಜಯ್ ಕುಮಾರ್, ವೈದ್ಯ ವಿಕಾಸ್ ಕುಮಾರ್ ಗುಪ್ತಾ, ಪ್ಯಾರಾಮೆಡಿಕ್ ಸಚಿನ್ ಕುಮಾರ್ ಮಿಶ್ರಾ, ಸಹಾಯಕರಾದ ಅರ್ಚನಾ ದೇವಿ ಮತ್ತು ಧುರು ಕುಮಾರ್ ಮೃತರು ಎಂದು ತಿಳಿದು ಬಂದಿದೆ.

ಘಟನೆಗೆ ಪ್ರತಿಕೂಲ ಹವಾಮಾನ ಕಾರಣವಿರಬಹುದು. ತನಿಖೆಯ ನಂತರವೇ ನಿಖರ ಕಾರಣ ತಿಳಿದುಬರಲಿದೆ ರಾಂಚಿ ವಿಮಾನ ನಿಲ್ದಾಣದ ನಿರ್ದೇಶಕ ವಿನೋದ್ ಕುಮಾರ್ ತಿಳಿಸಿದ್ದಾರೆ.

error: Content is protected !!