
ಬ್ಯಾಂಕಾಕ್: ನಾಯಕಿ ರಾಧಾ ಯಾದವ್ ಅವರ ಉತ್ತಮ ಪ್ರದರ್ಶನದಿಂದ ಭಾರತ ‘ಎ’ ತಂಡವು ಶ್ರೀಲಂಕಾ ‘ಎ’ ತಂಡವನ್ನು 5 ವಿಕೆಟ್ ಅಂತರದಿಂದ ಮಣಿಸಿ ರೈಸಿಂಗ್ ಸ್ಟಾರ್ಸ್ ಏಷ್ಯಾ ಕಪ್ ಕ್ರಿಕೆಟ್ ಪಂದ್ಯಾವಳಿಯ ಫೈನಲ್ ಗೆ ಲಗ್ಗೆಯನ್ನಿಟ್ಟಿದೆ.
ಇನ್ನೊಂದು ಸೆಮಿಫೈನಲ್ ನಲ್ಲಿ ಬಾಂಗ್ಲಾ 54 ರನ್ನುಗಳಿಂದ ಪಾಕಿಸ್ಥಾನವನ್ನು ಮಣಿಸಿತು. ರವಿವಾರದ ಫೈನಲ್ ಪಂದ್ಯಾಟದಲ್ಲಿ ಬಾಂಗ್ಲಾದೇಶ ‘ಎ’ ತಂಡವನ್ನು ಎದುರಿಸಲಿದೆ.

ಬ್ಯಾಟಿಂಗ್ ಆಯ್ದುಕೊಂಡ ಶ್ರೀಲಂಕಾ ವನಿತೆಯರು 19.4 ಓವರ್ ಗಳಲ್ಲಿ 118ಕ್ಕೆ ಆಲೌಟಾದರೆ, ಭಾರತ ಕೇವಲ 13.3 ಓವರ್ ಗಳಲ್ಲಿ 5 ವಿಕೆಟಿಗೆ 119 ರನ್ ಬಾರಿಸಿತು.
ಎಡಗೈ ಸ್ಪಿನ್ನರ್ ರಾಧಾ ಯಾದವ್ 19 ರನ್ನಿಗೆ 4 ವಿಕೆಟ್ ಉರುಳಿಸಿದ ಬಳಿಕ ಅಜೇಯ 31 ರನ್ ಹೊಡೆದರು. ವೃಂದಾ ದಿನೇಶ್ ಸರ್ವಾಧಿಕ 42 ರನ್ ಮಾಡಿದರು. ಬೌಲಿಂಗ್ ನಲ್ಲಿ ಮಿಂಚಿದ ಇತರರೆಂದರೆ ಎಡಗೈ ಸ್ಪಿನ್ನರ್ ತನುಜಾ ಕನ್ವರ್ (20ಕ್ಕೆ 2) ಮತ್ತು ಲೆಗ್ ಸ್ಪಿನ್ನರ್ ಪ್ರೇಮಾ ರಾವತ್ (9ಕ್ಕೆ 2).
ಶ್ರೀಲಂಕಾ ಪರ ಆರಂಭಿಕ ಆಟಗಾರ್ತಿ ಸಂಜನಾ ಕವಿಂದಿ ಅತ್ಯಧಿಕ 31 ರನ್ ಹೊಡೆದರು. ಒಂದು ಹಂತದಲ್ಲಿ ಶ್ರೀಲಂಕಾ 2 ವಿಕೆಟಿಗೆ 71 ರನ್ ಮಾಡಿ ಉತ್ತಮ ಮೊತ್ತದ ಸೂಚನೆ ನೀಡಿತ್ತು. ಬಳಿಕ ಭಾರತದ ಸ್ಪಿನ್ ದಾಳಿಗೆ ತತ್ತರಿಸಿತು.
ದ್ವಿತೀಯ ಸೆಮಿಫೈನಲ್ ನಲ್ಲಿ ಬಾಂಗ್ಲಾದೇಶ 5 ವಿಕೆಟ್ ಅಂತರದಿಂದ ಪಾಕಿಸ್ಥಾನವನ್ನು ಕೆಡವಿತು. ಬಾಂಗ್ಲಾದೇಶ 8 ವಿಕೆಟಿಗೆ 110 ರನ್ ಮಾಡಿದರೆ, ಪಾಕಿಸ್ಥಾನ 16.4 ಓವರ್ ಗಳಲ್ಲಿ 56 ರನ್ನಿಗೆ ಆಲೌಟ್ ಆಯಿತು. ಸಂಜಿದಾ ಅಖ್ತರ್ 6 ರನ್ನಿಗೆ 3 ವಿಕೆಟ್ ಉಡಾಯಿಸಿದರು.