14ನೇ ವರ್ಷದ ತಿರುವೈಲುಗುತ್ತು ಸಂಕುಪೂಂಜ-ದೇವುಪೂಂಜ ಜೋಡುಕರೆ ಕಂಬಳಕ್ಕೆ ಚಾಲನೆ

ಮಂಗಳೂರು: 14ನೇ ವರ್ಷದ ವಾಮಂಜೂರು ತಿರುವೈಲುಗುತ್ತು ಸಂಕುಪೂಂಜ-ದೇವುಪೂಂಜ ಜೋಡುಕರೆ ಕಂಬಳಕ್ಕೆ ಶನಿವಾರ ಬೆಳಗ್ಗೆ ಚಾಲನೆ ನೀಡಲಾಯಿತು.


ಕಂಬಳದ ಗದ್ದೆಯಲ್ಲಿ ಪೂಜೆ ನೆರವೇರಿಸುವ ಮೂಲಕ ಚಾಲನೆ ನೀಡಿ ಮಾತಾಡಿದ ಜಿ.ಆರ್. ಎಜುಕೇಷನ್ ಟ್ರಸ್ಟ್ ಸ್ಥಾಪಕ ಗಣೇಶ್ ರಾವ್ ಅವರು, “ಕಂಬಳದ ಮೂಲಕ ತುಳುನಾಡಿನಲ್ಲಿ ಯುವಕರು ಒಗ್ಗೂಡುತ್ತಿದ್ದಾರೆ ಇದು ಕಂಬಳದ ನಿಜವಾದ ಸಾರ್ಥಕತೆ. ಅಭಿಪ್ರಾಯ ಬೇಧ ಇರಲೇಬಾರದು ಎಂದೇನಿಲ್ಲ. ಆದರೆ ನಮ್ಮ ನಮ್ಮ ನಡುವೆ ವೈರತ್ವ ದ್ವೇಷ ಬೇಡ. ಎಲ್ಲರನ್ನೂ ಪ್ರೀತಿಸಿ ಸಮಾನವಾಗಿ ಕಂಡವನು ಬೆಳೆಯುತ್ತಾನೆ. ಕಂಬಳಕ್ಕೆ ರಾಜ್ಯ ಸರಕಾರ ಆರ್ಥಿಕ ಬೆಂಬಲ ನೀಡುತ್ತಿರುವುದು ಮೆಚ್ಚತಕ್ಕ ವಿಚಾರ. ಮುಂದಿನ ದಿನಗಳಲ್ಲಿ 50 ಲಕ್ಷ ರೂ. ಅಲ್ಲದಿದ್ದರೂ 25 ಲಕ್ಷ ರೂಪಾಯಿಯನ್ನಾದರೂ ಕಂಬಳಕ್ಕೆ ನೀಡಬೇಕು” ಎಂದರು.

ಕಂಬಳ ಸಮಿತಿ ಗೌರವಾಧ್ಯಕ್ಷ ಮಿಥುನ್ ರೈ ಮಾತಾಡಿ, “ವಾಮಂಜೂರು ಅಮೃತೇಶ್ವರ ದೇವಸ್ಥಾನದ ಮುಂಭಾಗದಲ್ಲಿ ಕಂಬಳ ನಡೆಯುವುದರಿಂದ ಇದನ್ನು ದೇವರ ಕಂಬಳವೆಂದೇ ಕರೆಯುತ್ತಾರೆ. ಕಂಬಳದಿಂದ ಜನರ ನಡುವಿನ ಬೇಧ ದೂರವಾಗಿ ಸಾಮರಸ್ಯ ನೆಲೆಯಾಗಬೇಕು. ತುಳುನಾಡಿನ ಕಂಬಳಕ್ಕೆ ಎಲ್ಲೆಡೆ ಮಾನ್ಯತೆ ಸಿಗಬೇಕು. ಎರಡು ದಿನಗಳ ಕಾಲ ನಡೆಯುವ ವಾಮಂಜೂರು ಕಂಬಳದಲ್ಲಿ ಸುತ್ತಮುತ್ತಲಿನ ಊರುಗಳ ಕಂಬಳ ಪ್ರೇಮಿಗಳು ಪಾಲ್ಗೊಂಡು ಯಶಸ್ವಿಗೊಳಿಸಬೇಕು” ಎಂದರು.

ವೇದಿಕೆಯಲ್ಲಿ ಗಿರೀಶ್ ಆಳ್ವ,  ಸೀತಾರಾಮ್ ಜಾನು ಶೆಟ್ಟಿ, ಶಶಿಧರ್ ಶೆಟ್ಟಿ, ಕೊಲ್ಲೂರು ಮುಕಾಂಬಿಕಾ ದೇವಸ್ಥಾನದ ಟ್ರಸ್ಟಿ ಅಭಿಷೇಕ್ ಕೆ.ವಿ., ಪೊಳಲಿ ರಾಜರಾಜೇಶ್ವರಿ ದೇವಸ್ಥಾನದ ಆಡಳಿತ ಮೊಕ್ತೇಸರ ಮಂಜಯ್ಯ ಶೆಟ್ಟಿ, ದಿಲ್ ರಾಜ್ ಆಳ್ವ, ನಿತಿನ್ ಶೆಟ್ಟಿ, ಉಮೇಶ್ ಶೆಟ್ಟಿ ಪದವು ಮೇಗಿನ ಮನೆ, ಓಂಪ್ರಕಾಶ್ ಶೆಟ್ಟಿ, ಅನಿಲ್ ಪೂಜಾರಿ, ಗೋಪಾಲಕೃಷ್ಣ ಭಂಡಾರಿ, ಪುಷ್ಪರಾಜ್ ಶೆಟ್ಟಿ, ಲೊಕೇಶ್ ಶೆಟ್ಟಿ ಮುಚ್ಚೂರು ಕಲ್ಕುಡೆ ಮತ್ತಿತರರು ಉಪಸ್ಥಿತರಿದ್ದರು.

error: Content is protected !!