
ಬಾಗಲಕೋಟೆ: ಕಬ್ಬಿನ ಕಟಾವು ಕೆಲಸಕ್ಕೆ ತೆರಳುತ್ತಿದ್ದ ಟ್ರ್ಯಾಕ್ಟರ್‌ನ ಟ್ರ್ಯಾಲಿ ಏಕಾಏಕಿ ಕಟ್ ಆಗಿ ಪಲ್ಟಿಯಾದ ಪರಿಣಾಮ ಎರಡು ವರ್ಷದ ಮಗು ಸೇರಿದಂತೆ ನಾಲ್ವರು ದುರ್ಮರಣ ಹೊಂದಿರುವ ಘಟನೆ ಜಿಲ್ಲೆಯ ಜಮಖಂಡಿ ತಾಲೂಕಿನ ಕಟ್ಟೆ ಕೆರೆ ಸಮೀಪ ಇಂದು(ಫೆ.21) ಮುಂಜಾನೆ ರಾತ್ರಿ ಸುಮಾರು 2 ಗಂಟೆಯ ವೇಳೆಗೆ ಸಂಭವಿಸಿದೆ.

ಮಹಾರಾಷ್ಟ್ರ ರಾಜ್ಯದ ಯುವತ್ಮಾಳ್ ಜಿಲ್ಲೆಯ ಬೂಸಾ ತಾಲ್ಲೂಕಿನ ಗುಪವಾಡಿ ನಿವಾಸಿಗಳಾದ ಮನೀಷ್ ಪಾಂಡೆ (23), ಹಲಕಿ ಪಾಂಡೆ (2), ಲಕ್ಷ್ಮಿ ಚಿರಮಡಿ (27) ಹಾಗೂ ರೇಖಾ ಭೂಕೆ ಮೃತ ದುರ್ದೈವಿಗಳು.
ಕಬ್ಬಿನ ಕಟಾವು ಕೆಲಸಕ್ಕಾಗಿ ಜಮಖಂಡಿ ಭಾಗಕ್ಕೆ ಆಗಮಿಸಿದ್ದ ವೇಳೆ ಈ ದುರ್ಘಟನೆ ನಡೆದಿದ್ದು, ಅಪಘಾತದ ತೀವ್ರತೆಗೆ ನಾಲ್ವರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಘಟನಾ ಸ್ಥಳಕ್ಕೆ ಜಮಖಂಡಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.