ಹಸಿವು ಅಂದರೆ ಏನು ಅಂತ ತಿಳಿಯಬೇಕಾದರೆ ಮನುಷ್ಯ ಒಮ್ಮೆಯಾದರೂ ರಂಝಾನ್ ಉಪವಾಸವನ್ನು ನೋಡಬೇಕು. ಹೊಟ್ಟೆ ಚುರುಗುಟ್ಟುವಾಗ ಪಕ್ಕದವನ ಹಸಿವಿನ ನೋವು ಅರ್ಥವಾಗುತ್ತದಲ್ಲ, ಅದೇ ಈ ಪವಿತ್ರ ಮಾಸದ ಅಸಲಿ ಸತ್ವ. ಇವತ್ತು ಫೆಬ್ರವರಿ 18, ಆಕಾಶದಲ್ಲಿ ಚಂದ್ರನ ದರ್ಶನವಾಗುತ್ತಿದ್ದಂತೆ ಇಡೀ ದೇಶದ ಮುಸ್ಲಿಂ ಬಾಂಧವರು ಭಕ್ತಿ ಮತ್ತು ಶಿಸ್ತಿನ ಪರಾಕಾಷ್ಠೆಗೆ ಸಿದ್ಧರಾಗಿದ್ದಾರೆ.

ಕೊಲ್ಲಿ ರಾಷ್ಟ್ರಗಳಲ್ಲಿ ಈಗಾಗಲೇ ಹಬ್ಬದ ಸಂಭ್ರಮ ಶುರುವಾಗಿದೆ. ಆದರೆ ಭಾರತದಲ್ಲಿ ಬುಧವಾರ ಸಂಜೆ ಚಂದ್ರ ಕಾಣಿಸಿಕೊಳ್ಳುತ್ತಿದ್ದಂತೆ, ಗುರುವಾರದಿಂದ (ಫೆಬ್ರವರಿ 19) ಮೊದಲ ʻರೋಜಾ’ ಆರಂಭವಾಗಲಿದೆ. ಇದು ಕೇವಲ ಅನ್ನ-ನೀರು ಬಿಟ್ಟು ಕೂರುವುದಲ್ಲ; ಇದು ಮನಸ್ಸಿನ ಕಸವನ್ನು ಗುಡಿಸಿ, ದೇವರ ಮುಂದೆ ಮಂಡಿಯೂರಿ ತನ್ನ ತಪ್ಪುಗಳನ್ನು ಒಪ್ಪಿಕೊಳ್ಳುವ ಕ್ಷಣ.
ವಿಚಿತ್ರ ನೋಡಿ… ಈ ಜಗತ್ತಿನ ಕದನಗಳ ನಡುವೆಯೂ ಶಾಂತಿಯ ಮಂತ್ರ ಪಠಿಸುವುದು ಇದೇ ಮಾಸ!
ಇಸ್ಲಾಂ ಧರ್ಮದ ಪವಿತ್ರ ಗ್ರಂಥ ʻಕುರಾನ್’ ಭೂಮಿಗೆ ಇಳಿದ ಈ ಕಾಲದಲ್ಲಿ, ಸೆಹ್ರಿಯಿಂದ ಹಿಡಿದು ಇಫ್ತಾರ್‌ವರೆಗೆ ನಡೆಯುವ ಆ ಆಚರಣೆ ಇದೆಯಲ್ಲ, ಅದು ಮನುಷ್ಯನನ್ನು ಮಗುವಿನಂತೆ ಪವಿತ್ರಗೊಳಿಸುತ್ತದೆ. ದಿನದ 12 ರಿಂದ 14 ಗಂಟೆಗಳ ಕಾಲ ಹನಿ ನೀರು ಕೂಡ ಕುಡಿಯದೆ ಇರಬೇಕಾದರೆ ಎಂಥಾ ಸಂಯಮ ಬೇಕು ಅಂದುಕೊಂಡಿರಿ? ರಾತ್ರಿ ಮಸೀದಿಗಳಲ್ಲಿ ಕೇಳಿ ಬರುವ ʻತರಾವೀಹ್’ ಪ್ರಾರ್ಥನೆಯ ದನಿ ಗಾಳಿಯಲ್ಲಿ ತೇಲಿ ಬರುವಾಗ ಮನುಷ್ಯನ ಅಹಂಕಾರವೆಲ್ಲ ಕರಗಿ ನೀರಾಗುತ್ತದೆ.

ದಾನ ಅಂದರೆ ಅದು ಜಕಾತ್; ಬಡವನ ಕಣ್ಣೀರು ಒರೆಸುವ ಕೈಗಳೇ ದೇವರಿಗೆ ಪ್ರೀತಿ!
ರಂಝಾನ್ ಅಂದರೆ ಬರೀ ಹಬ್ಬವಲ್ಲ, ಅದು ಸಮಾಜದ ಆರ್ಥಿಕ ಅಸಮಾನತೆಯನ್ನು ಹೋಗಲಾಡಿಸುವ ಕ್ರಾಂತಿ. ಪ್ರತಿಯೊಬ್ಬ ಮುಸ್ಲಿಂ ತನ್ನ ಸಂಪಾದನೆಯ 2.5 ಪ್ರತಿಶತದಷ್ಟು ಭಾಗವನ್ನು ಬಡವರಿಗೆ ನೀಡಲೇಬೇಕು ಎಂಬ ನಿಯಮವಿದೆಯಲ್ಲ, ಅಲ್ಲಿ ಜಾತಿ-ಧರ್ಮಗಳ ಹಂಗಿಲ್ಲ. ಇಫ್ತಾರ್ ಕೂಟಗಳಲ್ಲಿ ಹಿಂದೂ-ಮುಸ್ಲಿಂ-ಕ್ರಿಶ್ಚಿಯನ್ ಎಲ್ಲರೂ ಜೊತೆಯಾಗಿ ಕುಳಿತು ಖರ್ಜೂರ ಸವಿಯುವುದನ್ನು ನೋಡಿದರೆ, ಈ ದೇಶದ ಅಸಲಿ ಭಾವೈಕ್ಯತೆ ಯಾವುದು ಅಂತ ತಿಳಿಯುತ್ತದೆ.
ಹಸಿವಿನ ಅರಿವು ಮೂಡಿಸುವ, ಕೆಟ್ಟ ಮಾತುಗಳನ್ನು ಸುಡುವ ಮತ್ತು ಸೌಹಾರ್ದತೆಯ ಹೂವು ಅರಳಿಸುವ ಈ ರಂಜಾನ್ ಮಾಸ ಸರ್ವರಿಗೂ ಒಳಿತನ್ನು ಮಾಡಲಿ. ಚಂದ್ರನ ಬೆಳಕು ಎಲ್ಲರ ಮನೆಯಲ್ಲೂ ಶಾಂತಿಯ ದೀಪ ಹಚ್ಚಲಿ.
