“ದೇಶದ ಸುಸ್ಥಿರ ಆರ್ಥಿಕ ಬೆಳವಣಿಗೆಗೆ ಬ್ಯಾಂಕಿಂಗ್ ಕ್ಷೇತ್ರವೇ ಭದ್ರ ಬುನಾದಿ” -ವಿಶ್ರಾಂತ ಐಎಎಸ್ ಅಧಿಕಾರಿ ದೆಬಾಶೀಶ್ ಪಾಂಡಾ

ಕರ್ಣಾಟಕ ಬ್ಯಾಂಕ್‌ನ 102ನೇ ಸಂಸ್ಥಾಪಕರ ದಿನಾಚರಣೆ

ಮಂಗಳೂರು: “ಭಾರತವು ಇಂದು ಕೇವಲ ಅಲ್ಪಾವಧಿಯ ಅನುಭೋಗದ ಆಧಾರದ ಮೇಲೆ ಬೆಳೆಯುತ್ತಿಲ್ಲ, ಬದಲಾಗಿ ಉತ್ಪಾದಕತೆಯನ್ನು ಹೆಚ್ಚಿಸುವ ಮೂಲಸೌಕರ್ಯಗಳ ಮೇಲೆ ಹೂಡಿಕೆ ಮಾಡುವ ಮೂಲಕ ದೀರ್ಘಾವಧಿಯ ಸುಸ್ಥಿರ ಆರ್ಥಿಕ ವಿಸ್ತರಣೆಗೆ ಭದ್ರ ಬುನಾದಿ ಹಾಕುತ್ತಿದೆ. ಈ ಮಹತ್ವಾಕಾಂಕ್ಷಿ ಪಯಣದಲ್ಲಿ ಬ್ಯಾಂಕಿಂಗ್ ಕ್ಷೇತ್ರವು ಕೇವಲ ಪೂರಕವಾಗಿರದೆ, ದೇಶದ ಆರ್ಥಿಕತೆಯ ಕೇಂದ್ರಬಿಂದುವಾಗಿ ಕಾರ್ಯನಿರ್ವಹಿಸಬೇಕಿದೆ,” ಎಂದು ವಿಶ್ರಾಂತ ಐಎಎಸ್ ಅಧಿಕಾರಿ, ಹಣಕಾಸು ತಜ್ಞ ದೆಬಾಶೀಶ್ ಪಾಂಡಾ ಅವರು ಹೇಳಿದರು. .

ನಗರದ ಕರ್ನಾಟಕ ಬ್ಯಾಂಕ್ ಪ್ರಧಾನ ಕಚೇರಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ಬ್ಯಾಂಕಿನ 102ನೇ ಸಂಸ್ಥಾಪಕರ ದಿನಾಚರಣೆಯಲ್ಲಿ ಅವರು ವಿಶೇಷ ಉಪನ್ಯಾಸ ನೀಡಿದರು. “ರಸ್ತೆಗಳು, ರೈಲ್ವೆಗಳು, ಲಾಜಿಸ್ಟಿಕ್ಸ್ ಕಾರಿಡಾರ್‌ಗಳು ಮತ್ತು ಡಿಜಿಟಲ್ ಮೂಲಸೌಕರ್ಯಗಳ ಮೇಲೆ ಭಾರತ ಮಾಡುತ್ತಿರುವ ಹೂಡಿಕೆಯು ಉತ್ಪಾದಕತೆಯನ್ನು ಹೆಚ್ಚಿಸುವ ಆಸ್ತಿಗಳಾಗಿವೆ. ಇದು ಕೇವಲ ಒಂದು ಚಕ್ರದ ವೇಗವರ್ಧನೆಯಲ್ಲ, ಬದಲಾಗಿ ಭಾರತದ ಭವಿಷ್ಯದ ದಶಕಗಳ ಬೆಳವಣಿಗೆಯ ವಿನ್ಯಾಸವಾಗಿದೆ. ಶಿಕ್ಷಣ, MSME ಮತ್ತು ಕೃಷಿ ಮೌಲ್ಯ ಸರಪಳಿಗಳಿಗೆ ನೀಡುತ್ತಿರುವ ಬೆಂಬಲವು ಬೆಳವಣಿಗೆಯನ್ನು ಎಲ್ಲರಿಗೂ ತಲುಪುವಂತೆ ಮಾಡಲಿದೆ,” ಎಂದರು.
“ಮುಂದಿನ ಎರಡು ದಶಕಗಳ ಕಾಲ ಭಾರತದ ಆರ್ಥಿಕತೆಯು ಉನ್ನತ ಮಟ್ಟದಲ್ಲಿರಬೇಕಾದರೆ ಬ್ಯಾಂಕುಗಳು ತಯಾರಿಕಾ ವಲಯ, ಇಂಧನ ಪರಿವರ್ತನೆ ಮತ್ತು ಡಿಜಿಟಲ್ ಉದ್ಯಮಶೀಲತೆಗೆ ಹೆಚ್ಚಿನ ಹಣಕಾಸು ಒದಗಿಸಬೇಕಾದ ಅನಿವಾರ್ಯತೆ ಇದೆ. ಜಾಗತಿಕ ಮಟ್ಟದ ಸವಾಲುಗಳನ್ನು ಎದುರಿಸಬಲ್ಲ ಬಲಿಷ್ಠ ಬ್ಯಾಂಕಿಂಗ್ ವ್ಯವಸ್ಥೆಯು ಭಾರತಕ್ಕೆ ಇಂದು ಅತ್ಯಗತ್ಯ ಎಂದು ಅವರು ಒತ್ತಿ ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕರ್ನಾಟಕ ಬ್ಯಾಂಕ್‌ನ ಅಧ್ಯಕ್ಷರಾದ ಪಿ. ಪ್ರದೀಪ್ ಕುಮಾರ್ ಅವರು ಬ್ಯಾಂಕಿನ 102 ವರ್ಷಗಳ ಸುದೀರ್ಘ ಪಯಣ ಮತ್ತು ಗ್ರಾಹಕರ ನಂಬಿಕೆಯ ಬಗ್ಗೆ ಮಾತನಾಡಿದರು.
ಬ್ಯಾಂಕಿನ ಮ್ಯಾನೇಜಿಂಗ್ ಡೈರೆಕ್ಟರ್ ಮತ್ತು ಸಿಇಒ ಶ್ರೀಕೃಷ್ಣ ರಾಘವೇಂದ್ರ ಭಟ್ ಅವರು ಉಪಸ್ಥಿತರಿದ್ದರು.

error: Content is protected !!