
ಬೆಂಗಳೂರು: ಮಧ್ಯರಾತ್ರಿ ರಸ್ತೆ ಮಧ್ಯೆಯೇ ಉಬರ್ ಕ್ಯಾಬ್ ಚಾಲಕನ ಮೇಲೆ ಮತ್ತೊಬ್ಬ ಚಾಲಕ ಮತ್ತು ಗ್ಯಾಂಗ್ನಿಂದ ಕಾರು ಅಡ್ಡ ಹಾಕಿ ಮನ ಬಂದಂತೆ ಥಳಿಸಿದ ಘಟನೆ ನಗರದ ಡಬಲ್ ರೋಡ್ನಲ್ಲಿ ಶುಕ್ರವಾರ(ಮೇ 22) ನಡೆದಿದ್ದು, ವಿಲ್ಸನ್ ಗಾರ್ಡನ್ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.

ಮತ್ತೊಬ್ಬ ಚಾಲಕ ಹಾಗೂ ಆತನ ಗ್ಯಾಂಗ್ ಸೇರಿ ಉಬರ್ ಕ್ಯಾಬ್ ಅನ್ನು ಮಧ್ಯರಸ್ತೆಯಲ್ಲೇ ಅಡ್ಡಗಟ್ಟಿ ಉಬರ್ ಡ್ರೈವರ್‌ನನ್ನು ಬಲವಂತವಾಗಿ ಕಾರಿನಿಂದ ಕೆಳಗೆ ಇಳಿಸಿ, ಮನಬಂದಂತೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಹಲ್ಲೆ ನಡೆಸುವಾಗ ಪಕ್ಕದಲ್ಲೇ ಯುವತಿಯೊಬ್ಬರು ನಿಂತಿದ್ದರೂ ಲೆಕ್ಕಿಸದೆ ಚಾಲಕನ ಮೇಲೆ ಅಟ್ಯಾಕ್ ಮಾಡಿದ್ದಾರೆ.

ಈ ಘಟನೆ ವಿಲ್ಸನ್ ಗಾರ್ಡನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಮಾಹಿತಿ ತಿಳಿಯುತ್ತಿದ್ದಂತೆಯೇ ವಿಲ್ಸನ್ ಗಾರ್ಡನ್ ಪೊಲೀಸರು ಅಲರ್ಟ್ ಆಗಿದ್ದಾರೆ. ಹಲ್ಲೆ ನಡೆದ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು, ಆದರೆ ಇದುವರೆಗೆ ಯಾವುದೇ ಅಧಿಕೃತ ದೂರು ದಾಖಲಾಗಿಲ್ಲ.

ದೂರು ದಾಖಲಾಗದಿದ್ದರೂ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು, ಕೆ.ಹೆಚ್. ರಸ್ತೆಯ ಸುತ್ತಮುತ್ತಲಿರುವ ವಿವಿಧ ಸಿಸಿ ಕ್ಯಾಮರಾಗಳ ದೃಶ್ಯಾವಳಿಗಳನ್ನು ತೀವ್ರವಾಗಿ ಪರಿಶೀಲಿಸುತ್ತಿದ್ದಾರೆ. ದಾಳಿಗೆ ಒಳಗಾದ ಉಬರ್ ಕ್ಯಾಬ್ ಹಾಗೂ ಅಟ್ಯಾಕ್ ಮಾಡಿದ ಗ್ಯಾಂಗ್‌ನ ಕಾರಿನ ನೋಂದಣಿ ಸಂಖ್ಯೆಗಳನ್ನು ಪತ್ತೆ ಹಚ್ಚಲಾಗುತ್ತಿದ್ದು, ಆರೋಪಿಗಳ ಪತ್ತೆಗಾಗಿ ಜಾಲ ಬೀಸಿದ್ದಾರೆ.