ಕುಡುಂಬೂರು ನಡುಗಿರಿಯಲ್ಲಿರುವ ದೈವಸ್ಥಾನದ ಪಿಲಿಚಂಡಿಯ ಕಾರ್ಣಿಕ ಕಂಡು ಭಕ್ತರಲ್ಲಿ ಅಚ್ಚರಿ!!

ಮಂಗಳೂರು: ಬೈಕಂಪಾಡಿ ಕೈಗಾರಿಕಾ ವಲಯದ ಕುಡುಂಬೂರು ನಡುಗಿರಿಯಲ್ಲಿರುವ ದೈವಸ್ಥಾನದಲ್ಲಿ ದೈವದ ಕಾರ್ಣಿಕದ ಕಂಡು ಭಕ್ತರು ಅಚ್ಚರಿಗೊಂಡಿದ್ದಾರೆ. ಮಂಗಳೂರು ಭಾಗದ ಶ್ರೀ ಜಾರಂದಾಯ ಹಾಗೂ ಸಹಪರಿವಾರ ದೈವಸ್ಥಾನದಲ್ಲಿ ನಡೆದ ಪಿಲಿಚಂಡಿ ದೈವದ ನೇಮೋತ್ಸವದ ವೇಳೆ ದೈವದ ಉಯ್ಯಾಲೆ ತನ್ನಿಂದ ತಾನೇ ತೂಗಿದ ದೃಶ್ಯ ಕಂಡು ಆಶ್ಚರ್ಯ ಚಕಿತರಾಗಿದ್ದಾರೆ.

ನೇಮೋತ್ಸವದ ಸಂದರ್ಭದಲ್ಲಿ ಪಿಲಿಚಂಡಿ ದೈವಕ್ಕೆ ಗಗ್ಗರ ಇಡುವಾಗ ದೈವಸ್ಥಾನ ಪ್ರದೇಶದಲ್ಲಿ ಏಕಾಏಕಿ ದೊಡ್ಡ ಸದ್ದು ಕೇಳಿಬಂದಿದ್ದು, ಸಿಡಿತದಂತಿದ್ದ ಶಬ್ದದಿಂದ ಅಲ್ಲಿದ್ದವರು ಕ್ಷಣಕಾಲ ಆತಂಕಗೊಂಡರು. ಬಳಿಕ ನೋಡಿದಾಗ ನೇಮೋತ್ಸವ ನಡೆಯುತ್ತಿದ್ದ ಸ್ಥಳದ ಮುಂಭಾಗದಲ್ಲಿರುವ ಹೊಳ್ಳರ ಚಾವಡಿಯಲ್ಲಿದ್ದ ದೈವದ ತೂಗುಯ್ಯಾಲೆ ತನ್ನಿಂದ ತಾನೇ ತೂಗುತ್ತಿರುವುದು ಕಂಡು ಭಕ್ತರು ಆಶ್ಚರ್ಯಕ್ಕೊಳಗಾದರು.

ಉಯ್ಯಾಲೆ ರೀತಿಯ ದೈವದ ಮಂಚದಲ್ಲಿ ಪಿಲಿಚಂಡಿ ದೈವ ತನ್ನ ಕಾರಣಿಕ ಶಕ್ತಿಯನ್ನು ಪ್ರದರ್ಶಿಸಿದೆ ಎಂದು ಭಕ್ತರು ನಂಬಿಕೆ ವ್ಯಕ್ತಪಡಿಸಿದ್ದಾರೆ. ನೇಮೋತ್ಸವದ ಸಂದರ್ಭದಲ್ಲಿ ನಡೆದ ಈ ಘಟನೆಗೆ ಸಾಕ್ಷಿಯಾದ ಭಕ್ತರು, ದೈವ ಪವಾಡವನ್ನು ಕಣ್ಣಾರೆ ಕಂಡ ಅನುಭವವನ್ನು ಹಂಚಿಕೊಂಡಿದ್ದಾರೆ.

ಘಟನೆಯ ಸುದ್ದಿ ತಿಳಿಯುತ್ತಿದ್ದಂತೆ ಸುತ್ತಮುತ್ತಲಿನ ಗ್ರಾಮಗಳಿಂದಲೂ ಭಕ್ತರು ದೈವಸ್ಥಾನಕ್ಕೆ ಹರಿದುಬಂದಿದ್ದು, ದೈವದ ಕಾರ್ಣಿಕ ಕಂಡು ಪುಳಕಿತರಾಗಿದ್ದಾರೆ. ಕರಾವಳಿ ಭಾಗದಲ್ಲಿ ದೈವ ನೇಮೋತ್ಸವಗಳ ವೇಳೆ ಇಂತಹ ಅಚ್ಚರಿಯ ಘಟನೆಗಳು ನಡೆದಿರುವ ಉದಾಹರಣೆಗಳು ಇದಕ್ಕೂ ಮೊದಲು ನಡೆದಿವೆ. ಪಿಲಿಚಂಡಿ ದೈವದ ಈ ಪವಾಡ ಇದೀಗ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ.

ಈ ಪ್ರದೇಶದಲ್ಲಿ ಕೈಗಾರಿಕೆಗಳ ಭರಾಟೆ ನಡುವೆ ದೈವ ಸಾನಿಧ್ಯ ಮತ್ತೆ ತಲೆ ಎತ್ತಿದ್ದೇ ರೋಚಕ ಎಂದು ಹೇಳಲಾಗಿದೆ. ಊರಿಗೆ ಊರೇ ಒಕ್ಕಲೆದ್ದರೂ ದೈವ ಸಾನಿಧ್ಯ ಮಾತ್ರ ಉಳಿದಿತ್ತು. ನಡುಗಿರಿಯ ದೈವ ಭೂಮಿ ಸುಮಾರು 30 ವರ್ಷಗಳ ಹಿಂದೆ ಕೃಷಿ ಭೂಮಿಯಾಗಿತ್ತು. ದೈವ ಸಾನಿಧ್ಯ ಸೇರಿದಂತೆ ಇಡೀ ಭೂಮಿಯನ್ನು ಕೈಗಾರಿಕೆಗಳಿಗಾಗಿ ಸರಕಾರ ವಶಪಡಿಸಿಕೊಂಡಿತ್ತು. ಇಡೀ ಊರೇ ಬೇರೆ ಕಡೆಗೆ ಸ್ಥಳಾಂತಾರಗೊಂಡಿತ್ತು. ಈಗ ತೂಗಿರುವ ಇದೇ ಉಯ್ಯಾಲೆಯಲ್ಲಿ ಐದು ದೈವ ಶಕ್ತಿಗಳಿಗೆ ಹೂವು ಇಟ್ಟು ಹಿರಿಯರು ಆರಾಧನೆ ಮಾಡುತ್ತಿದ್ದರು. 33 ವರ್ಷಗಳ ಹಿಂದೆ ಕಾನೂನು ವ್ಯಾಜ್ಯದಿಂದ ಜಾತ್ರೋತ್ಸವ ನಿಂತಿತ್ತು. ಆದರೆ, ಒಂದಲ್ಲ ಒಂದು ದಿನ ಭೂಮಿಯಿಂದ ಎದ್ದು ಬರುತ್ತೇನೆ ಎಂದು ಜಾರಾಂದಾಯ ದೈವ ಅಭಯ ನೀಡಿತ್ತು ಎಂದು ಸ್ಥಳೀಯರು ಹೇಳುತ್ತಾರೆ.

ದೈವ ಸಾನಿಧ್ಯದ ಜಾಗವನ್ನು ಖರೀದಿಸಲು ಕೈಗಾರಿಕಾ ಉದ್ಯಮಿಗಳು ಹಿಂದೇಟು ಹಾಕಿದ್ದರು. ಹೀಗಾಗಿ ದೈವದ ಭೂಮಿಯನ್ನು ಕೆಐಎಡಿಬಿ ವಾಪಸ್ ನೀಡಿತ್ತು. ನಂತರ ಟ್ರಸ್ಟ್ ರಚಿಸಿ ಆಡಳಿತ ಮಂಡಳಿ ದೈವದ ಭೂಮಿಯನ್ನು ವಾಪಸು ಪಡೆದಿತ್ತು. 2019ರಲ್ಲಿ ಭಕ್ತರು ಮತ್ತೆ ಜಿರ್ಣೋದ್ಧಾರಕ್ಕೆ ಮುಂದಾಗಿದ್ದರು. 2022ರಲ್ಲಿ ಮತ್ತೆ ದೈವ ಸಾನಿಧ್ಯದ ಜೀರ್ಣೋದ್ದಾರ ನಡೆದು ನೇಮೋತ್ಸವ ಆರಂಭವಾಗಿತ್ತು. ದೈವಸ್ಥಾನದ ಜೀರ್ಣೋದ್ಧಾರದ ಬಳಿಕ ಸ್ಥಳೀಯ ಕೈಗಾರಿಕೆಗಳು ವ್ಯವಹಾರದಲ್ಲಿ ಏಳಿಗೆ ಕಂಡವು ಎಂದು ಸ್ಥಳೀಯರು ಹೇಳುತ್ತಾರೆ.

error: Content is protected !!