
ಉಳ್ಳಾಲ: ಖಾಸಗಿ ಶಾಲೆಯ ಬಸ್‌ನ ಹಿಂಬದಿಗೆ ಮೀನು ಸಾಗಾಟದ ಕ್ಯಾಂಟರ್ ಡಿಕ್ಕಿ ಹೊಡೆದ ಘಟನೆ ರಾಷ್ಟ್ರೀಯ ಹೆದ್ದಾರಿ 66ರ ಕಾಪಿಕಾಡು ಎಂಬಲ್ಲಿ ಸೋಮವಾರ(ಫೆ.16) ಬೆಳಿಗ್ಗೆ ನಡೆದಿದ್ದು, ಏಳು ಮಂದಿ ವಿದ್ಯಾರ್ಥಿಗಳಿಗೆ ಸಣ್ಣ ಪುಟ್ಟ ಗಾಯಗಳಾಗಿದೆ ಎನ್ನಲಾಗಿದೆ.

ತಲಪಾಡಿಯ ಶಾರದಾ ನಿಕೇತನ ಪಬ್ಲಿಕ್ ಸ್ಕೂಲ್ ಮತ್ತು ಕಾಲೇಜಿಗೆ ಸೇರಿದ ಬಸ್ ಕಾಪಿಕಾಡಿನ ಹೆದ್ದಾರಿ ಅಂಚಿನಲ್ಲಿ ವಿದ್ಯಾರ್ಥಿಗಳನ್ನು ಹತ್ತಿಸಿ ತಲಪಾಡಿ ಕಡೆಗೆ ತೆರಳುತ್ತಿದ್ದ ವೇಳೆ ಅವಘಡ ನಡೆದಿದ್ದು, ಗೋವಾದಿಂದ ಕೇರಳದ ಕಡೆಗೆ ಕ್ಯಾಂಟರ್‌ನಲ್ಲಿ ಮೀನು ಸಾಗಿಸುತ್ತಿದ್ದ ಕುಂದಾಪುರ ಮೂಲದ ಚಾಲಕ ಸಂಜೀವ ನಿದ್ದೆ ಮಂಪರಿನಲ್ಲಿದ್ದ ಪರಿಣಾಮ ಅಪಘಾತ ನಡೆದಿರುವುದಾಗಿ ಸ್ಥಳೀಯರು ತಿಳಿಸಿದ್ದಾರೆ. ಡಿಕ್ಕಿಯ ರಭಸಕ್ಕೆ ಬಸ್‌ನ ಹಿಂಭಾಗದ ಸೀಟುಗಳು ಕಿತ್ತು ಹೋಗಿವೆ.

ವಿದ್ಯಾರ್ಥಿಗಳಿಗೆ ತೊಕ್ಕೊಟ್ಟಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದ್ದು ಚೇತರಿಸಿಕೊಂಡಿದ್ದಾರೆ. ಓರ್ವ ವಿದ್ಯಾರ್ಥಿಯ ಕಾಲಿಗೆ ಗಂಭೀರ ಗಾಯವಾಗಿದ್ದು ಆತನನ್ನು ದೇರಳಕಟ್ಟೆಯ ಕೆ.ಎಸ್.ಹೆಗ್ಡೆ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮಂಗಳೂರು ದಕ್ಷಿಣ ಸಂಚಾರ ಠಾಣಾ ಪೊಲೀಸರು ಸ್ಥಳಕ್ಕೆ ಧಾವಿಸಿ ಘಟನೆಯ ಬಗ್ಗೆ ಪರಿಶೀಲನೆ ನಡೆಸಿದ್ದಾರೆ.