ಸಿದ್ದು ಶಿಷ್ಯರ ಸಿಡ್ನಿ ಸವಾರಿ: ಹಸುಗಳ ಅಧ್ಯಯನವೋ, ಕುರ್ಚಿ ಉಳಿಸುವ ಪ್ಲಾನೋ?

ಬೆಂಗಳೂರು: ರಾಜ್ಯ ರಾಜಕಾರಣದ ದುರಂಗದಾಟದಲ್ಲಿ ಯಾರೂ ಯಾರನ್ನೂ ನಂಬುವ ಹಾಗಿಲ್ಲ. ಒಂದೆಡೆ ʻನಾಯಕತ್ವ ಬದಲಾವಣೆ’ ಅನ್ನುವ ಗುಲ್ಲು ದೆಹಲಿಯಿಂದ ಬೆಂಗಳೂರಿನವರೆಗೆ ಹಬ್ಬಿದೆ. ಸಿದ್ದರಾಮಯ್ಯನವರ ಕುರ್ಚಿ ಅಲುಗಾಡುತ್ತಿದೆಯಾ ಅಥವಾ ಅವರ ಆಪ್ತರೆಲ್ಲರೂ ಸೇರಿ ಹೊಸದೊಂದು ಸ್ಕೆಚ್ ಹಾಕುತ್ತಿದ್ದಾರಾ? ಗೊತ್ತಿಲ್ಲ. ಆದರೆ, ಇಂತಹ ಗೊಂದಲದ ಗೂಡಿನ ನಡುವೆಯೇ 20 ಜನ ಶಾಸಕರು ಸದ್ದಿಲ್ಲದೆ ಸೂಟ್‌ಕೇಸ್ ಪ್ಯಾಕ್ ಮಾಡಿ ಏರ್‌ಪೋರ್ಟ್‌ಗೆ ಲಗ್ಗೆ ಇಟ್ಟಿದ್ದಾರೆ!

ಈ ಪ್ರವಾಸಕ್ಕೆ ಲೀ ಅಪ್ಪಟ ಸಿದ್ದರಾಮಯ್ಯನವರ ಭಕ್ತ, ಪಶುಸಂಗೋಪನಾ ಸಚಿವ ಕೆ. ವೆಂಕಟೇಶ್ ಅವರೇ ಲೀಡರ್.‌ ಇವರ ನೇತೃತ್ವದಲ್ಲಿ 17 ಶಾಸಕರು ಮತ್ತು ಮೂವರು ಎಂಎಲ್‌ಸಿಗಳು ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ಸುತ್ತಲು ರೆಡಿಯಾಗಿದ್ದಾರೆ. ಹೋಗುವುದು ಯಾವುದಕ್ಕೆ ಗೊತ್ತಾ? ಅಲ್ಲಿನ ಹಸು-ಕರುಗಳ ಬಗ್ಗೆ ʻಅಧ್ಯಯನ’ ಮಾಡುವುದಕ್ಕೆ ಅಂತೆ.

ಈ ಪ್ರವಾಸದ ಬಗ್ಗೆ ಡಿ.ಕೆ. ಶಿವಕುಮಾರ್ ಕೂಡ ಸ್ಟೇಟ್‌ಮೆಂಟ್ ಕೊಟ್ಟಿದ್ದು, “ನನಗೆ ಆ ಪ್ರವಾಸದ ಬಗ್ಗೆ ಗೊತ್ತೂ ಇಲ್ಲ, ನಾನದರ ಬಗ್ಗೆ ಕೇಳುವ ಗೋಜಿಗೆ ಹೋಗಿಲ್ಲ” ಅಂದಿದ್ದಾರೆ. ಅಂದರೆ, ಈ ಪ್ರವಾಸಕ್ಕೆ ಕೆಪಿಸಿಸಿ ಬಾಸ್ ಆಶೀರ್ವಾದ ಇಲ್ಲ ಎಂದೇ ಅರ್ಥ. ಸಿದ್ದರಾಮಯ್ಯನವರ ಬಣದವರು ಒಟ್ಟಾಗಿ ಹೋಗುತ್ತಿರುವುದು ಹೈಕಮಾಂಡ್‌ಗೆ ಕೊಟ್ಟ ʻಡೈರೆಕ್ಟ್ ಮೆಸೇಜ್’ ಎನ್ನುವ ಗಾಳಿ ವಿಧಾನಸೌಧದ ಕಾರಿಡಾರ್‌ಗಳಲ್ಲಿ ಜೋರಾಗಿ ಬೀಸುತ್ತಿದೆ.

ಕೆಲವರು ವೀಸಾ ಸಿಗಲಿಲ್ಲ ಅಂತ ಮುಖ ಸಣ್ಣಗೆ ಮಾಡಿಕೊಂಡು ಮನೆಯಲ್ಲೇ ಕೂತಿದ್ದಾರೆ. ಮತ್ತೆ ಕೆಲವರು ಹೈಕಮಾಂಡ್‌ನ ಕೆಂಗಣ್ಣಿಗೆ ಗುರಿಯಾಗಿ ಮುಂದಿನ ಚುನಾವಣೆಯಲ್ಲಿ ಟಿಕೆಟ್ ಮಿಸ್ ಆಗಬಹುದು ಅಂತ ಹೆದರಿ ʻಕಾಯಿಲೆ’ ನೆಪ ಹೇಳಿ ಜಾರಿಕೊಂಡಿದ್ದಾರೆ. ಇಲ್ಲಿ ಅಧ್ಯಯನ ಪ್ರವಾಸದ ಹಿಂದಿನ ಅಸಲಿ ಆಟ ಏನೆಂದು ಗೊತ್ತಾಗಬೇಕಾದರೆ ಮಾರ್ಚ್ 3ರ ನಂತರ ಗೊತ್ತಾಗಬೇಕಿದೆ.

error: Content is protected !!