
ವಿಜಯನಗರ: ಮನೆ ಕಟ್ಟಲು ಪರವಾನಗಿ ಕೊಟ್ಟಿಲ್ಲ ಅಂತ ರೈತನೋರ್ವ ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಕಡಬಗೆರೆ ಗ್ರಾ.ಪಂ. ಕಚೇರಿಯಲ್ಲೇ ಮೈ ಮೇಲೆ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ. ಇದೀಗ ಈ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಕಡಬಗೆರೆ ಪಂಚಾಯತ್ ವ್ಯಾಪ್ತಿಯ ಪವನಪುರ ಗ್ರಾಮದ ನಿವಾಸಿ ಕೆ. ಬಸವರಾಜ್ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ.

ಮನೆ ನಿರ್ಮಾಣಕ್ಕಾಗಿ ಇ-ಸೊತ್ತು ಹಾಗೂ ಪರವಾನಗಿ ನೀಡುವಂತೆ ಹಲವಾರು ಬಾರಿ ಅರ್ಜಿ ಸಲ್ಲಿಸಿದ್ದರೂ ಅನುಮತಿ ನೀಡಿಲ್ಲ, ಪರವಾನಗಿ ಇಲ್ಲದೇ ಬ್ಯಾಂಕ್ ಸಾಲ ಸಿಗುತ್ತಿಲ್ಲ. ಕಳೆದ ಆರು ತಿಂಗಳಿಂದ ಕಚೇರಿಗೆ ಸುತ್ತಾಡುತ್ತಿದ್ದೇನೆ ಎಂದು ಬಸವರಾಜ್ ತಿಳಿಸಿದ್ದಾರೆ. ಈ ವೇಳೆ ಕಡಬಗೆರೆ ಗ್ರಾ.ಪಂ. ಪಿಡಿಒ ಕೃಷ್ಣಪ್ಪ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಕಚೇರಿಯಲ್ಲೇ ಅರ್ಧ ಲೀಟರ್ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಘಟನೆಯನ್ನು ಗಮನಿಸಿದ ಪಿಡಿಒ ಕೃಷ್ಣಪ್ಪ ಹಾಗೂ ಸ್ಥಳೀಯರು ತಕ್ಷಣ ಮಧ್ಯಪ್ರವೇಶಿಸಿ ರೈತನನ್ನು ರಕ್ಷಿಸಿದ್ದಾರೆ.