ಸುರತ್ಕಲ್: ಅದು ಸುರತ್ಕಲ್‌ನ ಸುಭಾಷಿತ ನಗರ. ಹೆಸರಿಗೇನೋ ಅದು ʻಸುಭಾಷಿತʼ. ಆದರೆ ಅಲ್ಲಿನ ರಾಜಕಾಲುವೆಯ ಸ್ಥಿತಿ ನೋಡಿದರೆ ಸಾಕ್ಷಾತ್ ನರಕವೂ ನಾಚಬೇಕು! ಅಲ್ಲಿನ ಕೆಲವು ʻಬುದ್ಧಿವಂತ’ ನಿವಾಸಿಗಳ ಅಸಭ್ಯ ವರ್ತನೆಗೆ ಈಗ ಇಡೀ ಬಡಾವಣೆಯೇ ಬೆಲೆ ತೆರುತ್ತಿದೆ. ಸುಭಾಷಿತನ ನಗರದ ಸುಂದರ ಹೆಸರಿಗೀಗ ರಾಜಕಾಲುವೆಯೇ ಅಶುಭದ ಕಳೆ ತಂದಿದೆ.

ಮನುಷ್ಯನಿಗೆ ಮನೆಯ ಒಳಗಡೆ ಟೈಲ್ಸ್ ಹೊಳೆಯಬೇಕು, ಮಾರ್ಬಲ್ ಜಗಮಗಿಸಬೇಕು. ಆದರೆ ಅದೇ ಮನೆಯ ಕೊಳಕನ್ನು ಪ್ಲಾಸ್ಟಿಕ್ ಚೀಲದಲ್ಲಿ ಕಟ್ಟಿ, ರಾತ್ರೋರಾತ್ರಿ ಕಳ್ಳರಂತೆ ಬಂದು ರಾಜಕಾಲುವೆಗೆ ಎಸೆಯುವಾಗ ಸುಭಾಷಿತನಗರದ ಜನರ ಎದೆ ಧಸಕ್ ಎನ್ನುತ್ತದೆ.
ಸಿಸಿಟಿವಿಯಲ್ಲಿ ಸಿಕ್ಕಿಬಿದ್ದ ʻಕಸ’ದ ಮುಖಗಳು!
ತಮ್ಮ ಮನೆಯ ಕಸವನ್ನು ಅಚ್ಚುಕಟ್ಟಾಗಿ ವಿಲೇವಾರಿ ಮಾಡುವ ಬದಲು, ಪ್ಲಾಸ್ಟಿಕ್ ಚೀಲಗಳಲ್ಲಿ ಕಟ್ಟಿ ರಹಸ್ಯವಾಗಿ ತಂದು ರಾಜಕಾಲುವೆಗೆ ಎಸೆಯುವ ಒಂದು ದೊಡ್ಡ ʻಅನಾಗರಿಕ’ ಪಡೆ ಅಲ್ಲಿ ಸಕ್ರಿಯವಾಗಿದೆ. ವಿಶೇಷವಾಗಿ 2ನೇ, 8ನೇ ಮತ್ತು 12ನೇ ಅಡ್ಡ ರಸ್ತೆಯ ಸೇತುವೆಗಳೇ ಇವರ ಪಾಲಿಗೆ ಕಸದ ತೊಟ್ಟಿಗಳಾಗಿವೆ! ವ್ಯಕ್ತಿಯೊಬ್ಬ ಸೇತುವೆಯ ಮೇಲಿಂದ ಕಸದ ಬ್ಯಾಗ್ ಎಸೆಯುವ ಕೃತ್ಯ ಈಗಾಗಲೇ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇಂತವರ ಮುಖವಾಡ ಕಳಚುವ ಸಮಯ ಹತ್ತಿರ ಬಂದಿದೆ.

ಸೊಳ್ಳೆಗಳ ಮರಣಮೃದಂಗ.. ನಿದ್ರೆ ಕಳೆದುಕೊಂಡ ಜನ!
ರಾಜಕಾಲುವೆಗೆ ಎಸೆದ ಪ್ಲಾಸ್ಟಿಕ್ ಬ್ಯಾಗ್‌ಗಳಿಂದಾಗಿ ನದಿ ನೀರಿನ ಹರಿವು ಸಂಪೂರ್ಣ ಸ್ಥಗಿತಗೊಂಡಿದೆ. ನಿಂತ ನೀರು ಈಗ ಸೊಳ್ಳೆಗಳ ಸಾಮ್ರಾಜ್ಯವಾಗಿ ಮಾರ್ಪಟ್ಟಿದೆ. “ಸೊಳ್ಳೆಗಳ ಕಾಟಕ್ಕೆ ರಾತ್ರಿ ನಿದ್ರೆ ಮಾಡೋಕು ಆಗ್ತಿಲ್ಲ ಸಾಹೇಬ್ರೇ…” ಎನ್ನುವುದು ಅಲ್ಲಿನ ನಿವಾಸಿಗಳ ಅಳಲು. ಡೆಂಗ್ಯೂ, ಮಲೇರಿಯಾದಂತಹ ಮಾರಕ ಕಾಯಿಲೆಗಳು ಬಡಾವಣೆಯ ಮನೆ ಮನೆಗೆ ಲಗ್ಗೆ ಇಡುವ ಮುನ್ನವೇ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕಿದೆ.
ಮನಪಾ ಅಧಿಕಾರಿಗಳೇ, ಕುಂಭಕರ್ಣ ನಿದ್ದೆ ಬಿಡಿ!
ಸುಭಾಷಿತ ನಗರ ರೆಸಿಡೆಂಟ್ಸ್ ವೆಲ್ಫೇರ್ ಅಸೋಸಿಯೇಷನ್ ಈಗ ಮಂಗಳೂರು ಮಹಾನಗರ ಪಾಲಿಕೆಯ ಆರೋಗ್ಯ ಇಲಾಖೆಯ ಬಾಗಿಲು ತಟ್ಟಿದೆ.
“ಆ ರಾಜಕಾಲುವೆಯನ್ನು ಸ್ವಚ್ಛಗೊಳಿಸಿ, ಕಸ ಎಸೆಯುವ ಆ ಅಯೋಗ್ಯರ ವಿರುದ್ಧ ಕಠಿಣ ಕ್ರಮ ಜರುಗಿಸಿ” ಎಂದು ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಆಗ್ರಹಿಸಿದ್ದಾರೆ.
ಸಿಸಿಟಿವಿಯಲ್ಲಿ ಮುಖ ತೋರಿಸಿರುವ ಆ ‘ಕಸದ ಕಳ್ಳ’ನಿಗೆ ಚಳ್ಳೆಹಣ್ಣು ತಿನ್ನಿಸುವ ಧೈರ್ಯವನ್ನಾದರೂ ಈ ಅಧಿಕಾರಿಗಳು ತೋರಿಸುತ್ತಾರಾ? ಎಂದು ಕಾದುನೋಡಬೇಕಿದೆ.
