ಮಂಗಳೂರು: ಮಂಗಳೂರು ವಿಶ್ವವಿದ್ಯಾನಿಲಯದ ಮಂಗಳ ಅಲುಮ್ನಿ ಅಸೋಸಿಯೇಷನ್ (ಮಾ-ಎಂಬಿಎ) ವತಿಯಿಂದ ಬೃಹತ್ ಹಳೆಯ ವಿದ್ಯಾರ್ಥಿಗಳ ಮಹಾಸಂಗಮ ‘ಸ್ಮೃತಿ ಸಂಗಮ-2026’ ಅನ್ನು ಮಾರ್ಚ್ 1ರಂದು ಆಯೋಜಿಸಲಾಗಿದೆ ಎಂದು ಸಂಘದ ಹಿರಿಯ ಸದಸ್ಯ ರಾಜಾರಾಮ್ ರಾವ್ ಅವರು ತಿಳಿಸಿದರು.

ಮಂಗಳೂರಿನ ಪ್ರೆಸ್‌ಕ್ಲಬ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಕಾರ್ಯಕ್ರಮದ ವಿವರಗಳನ್ನು ಹಂಚಿಕೊಂಡ ಅವರು, ಮಾರ್ಚ್ 1, 2026 ರಂದು ಬೆಳಿಗ್ಗೆ 9:00 ಗಂಟೆಗೆ ಮಂಗಳೂರು ವಿವಿಯ ಮಂಗಳಗಂಗೋತ್ರಿ ಕ್ರೀಡಾಂಗಣದಲ್ಲಿ ಈ ಅದ್ಧೂರಿ ಸಮಾವೇಶ ನಡೆಯಲಿದೆ. ಸ್ಪೀಕರ್ ಯು.ಟಿ. ಖಾದರ್ ಉದ್ಘಾಟಿಸಲಿದ್ದು, ಕುಲಪತಿ ಪ್ರೊ. ಪಿ.ಎಲ್. ಧರ್ಮ ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು.
ಸಂಸ್ಥೆಯ ಹಿನ್ನೆಲೆಯನ್ನು ವಿವರಿಸಿದ ಅವರು, 2006/2007ರಲ್ಲಿ ಸ್ಥಾಪಿತವಾದ ಈ ಅಸೋಸಿಯೇಷನ್ ಈಗಾಗಲೇ 25,000ಕ್ಕೂ ಹೆಚ್ಚು ಹಳೆಯ ವಿದ್ಯಾರ್ಥಿಗಳನ್ನು ಒಗ್ಗೂಡಿಸಿದೆ. ಹಳೆಯ ವಿದ್ಯಾರ್ಥಿಗಳಲ್ಲಿ ನಿರಂತರ ಬಾಂಧವ್ಯ ಬೆಳೆಸುವುದು ಮತ್ತು ವಿಶ್ವವಿದ್ಯಾಲಯದ ಶೈಕ್ಷಣಿಕ ಅಭಿವೃದ್ಧಿಗೆ ಬೆಂಬಲ ನೀಡುವುದು ಈ ಸಂಸ್ಥೆಯ ಮುಖ್ಯ ಉದ್ದೇಶವಾಗಿದೆ ಎಂದರು.
ಅಸೋಸಿಯೇಷನ್ ವತಿಯಿಂದ ಈವರೆಗೆ ಉದ್ಯೋಗ ಮೇಳಗಳು, ಬಸ್ ಶೆಲ್ಟರ್ ನಿರ್ಮಾಣ ಹಾಗೂ ಶಿಕ್ಷಕರಿಗಾಗಿ ವಿಶೇಷ ಕಾರ್ಯಾಗಾರಗಳನ್ನು ಯಶಸ್ವಿಯಾಗಿ ನಡೆಸಲಾಗಿದೆ. ನಮ್ಮ ಈ ಮಹತ್ವಾಕಾಂಕ್ಷಿ ಕಾರ್ಯಕ್ರಮಕ್ಕೆ ದೇಶ-ವಿದೇಶಗಳಲ್ಲಿರುವ ಮಂಗಳೂರು ವಿಶ್ವವಿದ್ಯಾಲಯದ ಹಳೆಯ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ತಮ್ಮ ಹಳೆಯ ನೆನಪುಗಳನ್ನು ಮೆಲುಕು ಹಾಕುವ ಮೂಲಕ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು” ಎಂದು ರಾಜಾರಾಮ್ ರಾವ್ ಈ ಸಂದರ್ಭದಲ್ಲಿ ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಕಾರ್ಯಕಾರಿ ಸಮಿತಿ ಸದಸ್ಯರಾದ ಪ್ರದೀಪ್ ಡಿʼಸೋಜ ಹಾಗೂ ನಾಗೇಶ್ ಹಿರೇಗೌಡರ್ ಉಪಸ್ಥಿತರಿದ್ದರು.