ಕೊಚ್ಚಿ: ಆ ಹತ್ತು ತಿಂಗಳ ಕಂದ ಇನ್ನೂ ಸರಿಯಾಗಿ ಅಂಬೆಗಾಲು ಇಟ್ಟಿರಲಿಲ್ಲ. ತುಟಿಯಂಚಿನ ನಗು ಇನ್ನು ಪೂರ್ತಿ ಅರಳಿರಲಿಲ್ಲ. ಅಪ್ಪ ಅಮ್ಮ ಅಂತ ಕರೆಯೋಕೆ ಇನ್ನು ನಾಲಿಗೆ ಸರಿಯಾಗಿ ಹೊರಳುತ್ತಿರಲಿಲ್ಲ. ಆದರೆ, ಅಷ್ಟರಲ್ಲೇ ವಿಧಿ ಎಂಬ ಕ್ರೂರಿ ತನ್ನ ರಕ್ತಸಿಕ್ತ ಕೈಗಳನ್ನು ಚಾಚಿದೆ. ಫೆಬ್ರುವರಿ ಐದರ ಆ ಮಧ್ಯಾಹ್ನ, ಸೂರ್ಯ ನೆತ್ತಿಯ ಮೇಲಿದ್ದಾಗ ನಡೆದ ಆ ಒಂದು ಕ್ಷಣದ ಅಚಾತುರ್ಯ, ಒಂದು ಸುಂದರ ಸಂಸಾರವನ್ನು ಸ್ಮಶಾನ ಮೌನಕ್ಕೆ ದೂಡಿಬಿಟ್ಟಿತು.

ಕೊಟ್ಟಾಯಂನ ಪಲ್ಲಂ ಬಳಿ ಆ ಎರಡು ಕಾರುಗಳು ಮುಖಾಮುಖಿ ಅಪ್ಪಳಿಸಿದಾಗ ಕೇಳಿಸಿದ ಆ ಭೀಕರ ಶಬ್ದ ಇಡೀ ಕೇರಳವನ್ನೇ ನಡುಗಿಸಿರಬಹುದು. ಅಪ್ಪ ಅರುಣ್ ಅಬ್ರಾಹಂ, ಅಮ್ಮ ಶೆರಿನ್, ಅಜ್ಜ-ಅಜ್ಜಿ ಎಲ್ಲರೂ ಬದುಕುಳಿದರು. ಆದರೆ ವಿಧಿಯಾಟ ನೋಡಿ, ಆ ಎಳೆಯ ಹೂವು ಅಲಿನ್ ಮಾತ್ರ ರಕ್ತದ ಮಡುವಿನಲ್ಲಿ ಬಿದ್ದಿದ್ದಳು. ಸಾವು ಅವಳ ಕಣ್ಣಲ್ಲಿ ಕಣ್ಣಿಟ್ಟು ನೋಡಿತ್ತು.
ಅಮೃತಾ ಆಸ್ಪತ್ರೆಯ ಬಿಳಿ ಗೋಡೆಗಳ ನಡುವೆ, ಐಸಿಯುನ ಆ ಯಂತ್ರಗಳ ಕರ್ಕಶ ಶಬ್ದದ ಮಧ್ಯೆ ಆ ಪುಟ್ಟ ಜೀವ ಬದುಕಲಿ ಅಂತ ಪೋಷಕರು ಹಗಲು ರಾತ್ರಿ ಪ್ರಾರ್ಥಿಸಿದರು. ಆದರೆ, ಮಿದುಳು ನಿಷ್ಕ್ರಿಯಗೊಂಡಿದೆ (Brain Dead) ಅಂತ ವೈದ್ಯರು ಹೇಳಿದಾಗ ಆ ತಂದೆ-ತಾಯಿಯ ಎದೆ ಸೀಳಿ ಹೋಗಿರಬೇಕು. ಕಣ್ಣೀರು ಬತ್ತಿಹೋಗಿತ್ತು, ಗಂಟಲು ಒಣಗಿತ್ತು. ತಮ್ಮ ಕಣ್ಣೆದುರೇ ಮಗು ಕರಗಿ ಹೋಗುವುದನ್ನು ನೋಡುವ ಆ ನೋವಿದೆಯಲ್ಲ, ಅದು ಈ ಜಗತ್ತಿನ ಯಾವುದೇ ನರಕಕ್ಕಿಂತಲೂ ದೊಡ್ಡದು.

ಆದರೆ ನೋಡಿ, ಆ ಮಗುವಿನ ಅಪ್ಪ-ಅಮ್ಮ ಸಾಮಾನ್ಯ ಮನುಷ್ಯರಲ್ಲ. ತಮ್ಮ ಮಗು ಇನ್ನಿಲ್ಲ ಅನ್ನೋದು ಖಚಿತವಾದಾಗ, ಆ ನೋವಿನ ಕಡಲಲ್ಲೂ ಅವರು ಒಂದು ನಿರ್ಧಾರ ಮಾಡಿದರು. “ನಮ್ಮ ಮಗಳು ಹೋದರೂ ಪರವಾಗಿಲ್ಲ, ಅವಳ ಕಣ್ಣುಗಳು ಯಾರಲ್ಲೋ ಬದುಕಿರಲಿ, ಅವಳ ಹೃದಯ ಯಾರಿಗೋ ಬಡಿತ ನೀಡಲಿ” ಅಂತ ಅಂಗಾಂಗ ದಾನಕ್ಕೆ ಸಹಿ ಹಾಕಿದರು.
ಹತ್ತು ತಿಂಗಳ ಪುಟ್ಟ ಮಗು ಇವತ್ತು ದೇಶದ ಅತಿ ಕಿರಿಯ ಅಂಗಾಂಗ ದಾನಿ! ಅವಳು ಅಂಬೆಗಾಲು ಇಡುತ್ತಾ ಆ ಮನೆಯ ಮೂಲೆ ಮೂಲೆಗಳಲ್ಲಿ ಓಡಾಡಬೇಕಿತ್ತು. ಆದರೆ ಈಗ ಅವಳು ಸಾವಿರಾರು ಜನರ ಹೃದಯದಲ್ಲಿ ಬದುಕುತ್ತಿದ್ದಾಳೆ. ಆ ಪುಟ್ಟ ದೇವತೆ ಈಗ ನಕ್ಷತ್ರವಾಗಿ ಹೋಗಿದ್ದಾಳೆ.
ಹೋಗಿ ಬಾ ಪುಟ್ಟ ಅಲಿನ್… ನೀನು ಸಾಯಲಿಲ್ಲ. ನಿನ್ನ ಅಂಗಾಂಗಗಳನ್ನು ಹೊತ್ತವರ ಮೂಲಕ ನೀನು ಈ ಭೂಮಿಯ ಮೇಲೆ ಮತ್ತೆ ಮತ್ತೆ ಹುಟ್ಟುತ್ತಲೇ ಇರುತ್ತೀಯಾ. ನಿನ್ನ ಅಪ್ಪ-ಅಮ್ಮನ ಆ ದೈವಿಕ ಗುಣಕ್ಕೆ ಇಡೀ ದೇಶವೇ ತಲೆಬಾಗುತ್ತಿದೆ.
