
ದಾವಣಗೆರೆ: ಎರಡು ಪ್ರತ್ಯೇಕ ಕ್ರಿಮಿನಲ್ ಪ್ರಕರಣಗಳು ವರದಿಯಾಗಿದ್ದು, ಸಾರ್ವಜನಿಕರಲ್ಲಿ ಆತಂಕ ಮೂಡಿಸಿವೆ. ದಾವಣಗೆರೆಯಲ್ಲಿ ಶ್ರೀಮಂತ ಯುವಕರನ್ನು ಗುರಿಯಾಗಿಸಿಕೊಂಡು ಹನಿಟ್ರ್ಯಾಪ್ ನಡೆಸಿ ಹಣ, ಒಡವೆ ಸುಲಿಗೆ ಮಾಡುತ್ತಿದ್ದ ನಾಲ್ವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿರುವಂತಹ ಘಟನೆ ದಾವಣಗೆರೆ ಜಿಲ್ಲೆಯಲ್ಲಿ ನಡೆದಿದೆ.

ಪಂಚಮಿ(34), ಜಗದೀಶ(35), ಗಂಗಾ ಮಲ್ಲೇಶ್ ನಾಯ್ಕ(25) ಹಾಗೂ ವೆಂಕಟೇಶ್(30) ಬಂಧಿತರು.

ಈ ಗ್ಯಾಂಗ್ ಶ್ರೀಮಂತ ಹಿನ್ನೆಲೆಯುಳ್ಳ ಯುವಕರನ್ನು ಟಾರ್ಗೆಟ್ ಮಾಡುತ್ತಿತ್ತು. ಗ್ಯಾಂಗ್‌ನ ಸದಸ್ಯೆ ಪಂಚಮಿ (34) ಎಂಬಾಕೆ ಶ್ರೀಮಂತ ಯುವಕನೊಬ್ಬನೊಂದಿಗೆ ಸ್ನೇಹ ಬೆಳೆಸಿ, ಹರಿಹರ ತಾಲೂಕಿನ ಶಿವನಹಳ್ಳಿ ರಸ್ತೆಯ ನಿರ್ಜನ ಪ್ರದೇಶಕ್ಕೆ ಕರೆಸಿಕೊಂಡಿದ್ದಾಳೆ. ಈ ವೇಳೆ ಹೊಂಚು ಹಾಕಿ ಕುಳಿತಿದ್ದ ಜಗದೀಶ, ಗಂಗಾ ಮಲ್ಲೇಶ್ ನಾಯ್ಕ, ವೆಂಕಟೇಶ್ ಹಾಗೂ ಮತ್ತೊಬ್ಬ ಆರೋಪಿ ಧಾವಿಸಿ ಬಂದು ಯುವಕನ ಮೇಲೆ ಹಲ್ಲೆ ನಡೆಸಿ, ಚಿನ್ನಾಭರಣ ದೋಚಿ ಪರಾರಿಯಾಗಿದ್ದರು.

ದಾವಣಗೆರೆ ಗ್ರಾಮಾಂತರ ಠಾಣೆ ಪೊಲೀಸರು ಯಶಸ್ವಿ ಕಾರ್ಯಾಚರಣೆ ನಡೆಸಿ ಇಡೀ ಗ್ಯಾಂಗ್ ಅನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಈ ತಂಡ ಇನ್ನೂ ಹಲವು ಯುವಕರಿಗೆ ವಂಚಿಸಿರುವ ಶಂಕೆ ಇದ್ದು, ಪೊಲೀಸರು ಈ ಕುರಿತು ತನಿಖೆ ಚುರುಕುಗೊಳಿಸಿದ್ದಾರೆ.