ಚೆನ್ನೈ / ಮಧುರೈ: ತಮಿಳುನಾಡು ವಿಧಾನಸಭಾ ಚುನಾವಣೆಯ ಬೆನ್ನಲ್ಲೇ ದೇಶದ ಭದ್ರತಾ ಮತ್ತು ಸಾಂವಿಧಾನಿಕ ಇತಿಹಾಸದಲ್ಲೇ ಬೆಚ್ಚಿಬೀಳಿಸುವ ಮಹಾ ಹಗರಣವೊಂದು ಬಯಲಾಗಿದೆ! ಏಪ್ರಿಲ್ 23 ರಂದು ನಡೆದ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಅಕ್ರಮವಾಗಿ ವಿದೇಶಿ ಪ್ರಜೆಗಳು ಬಂದು ವೋಟ್ ಮಾಡಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದ್ದು, ಇಡೀ ಪ್ರಕರಣದ ಹಿನ್ನೆಲೆಯನ್ನು ಕೆದಕಲು ಚುನಾವಣಾ ಆಯೋಗವು (Election Commission) ತನಿಖೆಗೆ ಆದೇಶಿಸಿದೆ!

ಈ ಇಡೀ ಅಂತರರಾಷ್ಟ್ರೀಯ ಜಾಲ ಬಯಲಾಗಿದ್ದು ಚೆನ್ನೈ ಮತ್ತು ಮಧುರೈ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿ. ತಮಿಳುನಾಡಿನಲ್ಲಿ ಮತದಾನದ ಪ್ರಕ್ರಿಯೆ ಮುಗಿದ ಕೆಲವೇ ಗಂಟೆಗಳಲ್ಲಿ, ಹತ್ತು ಮಂದಿ ಪ್ರಯಾಣಿಕರು ಅತ್ಯಂತ ಅವಸರವಾಗಿ ವಿಮಾನ ಹತ್ತಲು ವಿಮಾನ ನಿಲ್ದಾಣಕ್ಕೆ ಬಂದಿದ್ದರು. ಆದರೆ, ಬೋರ್ಡಿಂಗ್ ಪಾಸ್ ಪರಿಶೀಲಿಸುವಾಗ ವಿಮಾನ ನಿಲ್ದಾಣದ ಅಧಿಕಾರಿಗಳ ಕಣ್ಣು ಅವರ ತೋರು ಬೆರಳುಗಳ ಮೇಲೆ ಬಿದ್ದಿದೆ. ಅಲ್ಲಿ ಚುನಾವಣೆಗೆ ಬಳಸುವ “ಅಳಿಸಲಾಗದ ಶಾಯಿ” (Indelible Ink) ಗುರುತು ದಟ್ಟವಾಗಿ ಕಾಣಿಸುತ್ತಿತ್ತು!

ವಿಮಾನ ನಿಲ್ದಾಣದ ಅಧಿಕಾರಿಗಳು ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಕಾರ್ಯಾಚರಣೆ ನಡೆಸಿ 10 ಮಂದಿ ವಿದೇಶಿ ಪ್ರಜೆಗಳನ್ನು ವಶಕ್ಕೆ ಪಡೆದಿದ್ದಾರೆ. ಚೆನ್ನೈ ಪೊಲೀಸರ ಕಠಿಣ ವಿಚಾರಣೆಯ ವೇಳೆ ಬಂಧಿತ ಕಿಡಿಗೇಡಿಗಳು ಶ್ರೀಲಂಕಾ, ಬ್ರಿಟನ್ (UK) ಮತ್ತು ಕೆನಡಾ ದೇಶಗಳಿಗೆ ಸೇರಿದ ಪ್ರಜೆಗಳು ಎಂಬ ಕಹಿ ಸತ್ಯ ಬಯಲಾಗಿದೆ! ಇವರು ತಮಿಳುನಾಡು ಚುನಾವಣೆಯಲ್ಲಿ ವೋಟ್ ಹಾಕಲೆಂದೇ ವ್ಯವಸ್ಥಿತವಾಗಿ ನಕಲಿ ಭಾರತೀಯ ಗುರುತಿನ ಚೀಟಿಗಳನ್ನು (Fake Indian ID Cards) ಸೃಷ್ಟಿಸಿಕೊಂಡಿದ್ದರು. ವೋಟ್ ಹಾಕಿ ಮುಗಿಸಿದ ತಕ್ಷಣ ತಮ್ಮ ದೇಶಗಳಿಗೆ ಹಾರಿ ಹೋಗಲು ಸ್ಕೆಚ್ ಹಾಕಿದ್ದರು. ಸದ್ಯ ಇವರ ವಿರುದ್ಧ 9 ಪ್ರತ್ಯೇಕ ಪ್ರಕರಣಗಳಲ್ಲಿ 10 ವಿದೇಶಿಗರನ್ನು ಸೆರೆಹಿಡಿಯಲಾಗಿದೆ.

ತಮಿಳುನಾಡು ಸರ್ಕಾರದ “ಕೇಂದ್ರ ಅಪರಾಧ ವಿಭಾಗ” (Central Crime Branch) ಈ ಸಂಬಂಧ ಅಧಿಕೃತ ಪ್ರಕರಣ ದಾಖಲಿಸಿಕೊಂಡು ಹಗರಣದ ಬೇರುಗಳನ್ನು ಹುಡುಕಲು ತನಿಖೆ ತೀವ್ರಗೊಳಿಸಿದೆ.
