ಮೇ 31- ಜೂನ್ 6 ವರೆಗೆ ಯಕ್ಷಧ್ರುವ ಸಮುದ್ರಯಾನ

ಮಂಗಳೂರು: ಮೇ 31 ರಿಂದ ಜೂನ್ 6 ರ ತನಕ ಆಯೋಜಿಸಲಾಗಿರುವ ಲಕ್ಷ ದ್ವೀಪ ಪ್ರಯಾಣದ ಯಕ್ಷಧ್ರುವ ಸಮುದ್ರಯಾನದ ಉದ್ಘಾಟನೆ ಬಲ್ಲಾಲ್ ಭಾಗ್ ಬಳಿ ಇರುವ ಪತ್ತುಮುಡಿ ಸೌಧದಲ್ಲಿ ನಡೆಯಿತು.

ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ನ ಮಹಾದಾನಿಗಳು ಬರೋಡ ಶಶಿಧರ ಶೆಟ್ಟಿ ಅವರು ಯಕ್ಷಧ್ರುವ ಸಮುದ್ರಯಾನದ ಬ್ಯಾನರ್ ಅನ್ನು ಅನಾವರಣಗೊಳಿಸುವ ಮೂಲಕ ಉದ್ಘಾಟನೆಯನ್ನು ನೆರವೇರಿಸಿದರು.

ಭವಾನಿ ಶಿಪ್ಪಿಂಗ್ ಸರ್ವಿಸಸ್ ಮುಂಬಯಿ ಇದರ ಸಂಪೂರ್ಣ ಸಹಕಾರದೊಂದಿಗೆ ಯಕ್ಷಧ್ರುವ ಪಟ್ಲ ಫೌಂಡೇಶನ್ ಹಾಗೂ ತ್ರಿರಂಗ ಸಂಗಮ ಮುಂಬಯಿ ಇವರ ಸಂಯೋಜನೆಯಲ್ಲಿ, ಫೌಂಡೇಶನ್ ನ ಸದಸ್ಯರು,ಊರಿನ, ಮುಂಬಯಿಯ ಹಾಗೂ ವಿದೇಶಗಳ ಹಿತೈಷಿಗಳನ್ನು ಹಡಗಿನಲ್ಲಿ ಒಂದೆಡೆ ಸೇರಿಸಿ ಯಕ್ಷಗಾನ, ತಾಳಮದ್ದಲೆ ಸಹಿತ ಬೇರೆ ಬೇರೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಬರೋಡ ಶಶಿಧರ ಶೆಟ್ಟಿ ತಿಳಿಸಿದರು.

ಮೇ 31 ರಂದು ಮಂಗಳೂರಿನಿಂದ ಮುಂಬೈಗೆ ತೆರಳಿ ಜೂನ್ 1 ರಂದು ಹಡಗಿನಲ್ಲಿ ಲಕ್ಷದ್ವೀಪಕ್ಕೆ ತೆರಳಿ ಜೂನ್ 6 ಕ್ಕೆ ಮಂಗಳೂರಿಗೆ ವಾಪಾಸು ಬರಲಾಗುವುದು. ಪ್ರಯಾಣದ ದರವನ್ನು ನಿಗದಿಗೊಳಿಸಲಾಗಿದ್ದು, ಆಸಕ್ತರು ಇದರ ಪ್ರಯೋಜನವನ್ನು ಪಡೆಯಬಹುದಾಗಿದೆ.‌ ಮುಂದಿನ ವರ್ಷ ವಿಮಾನಯಾನ ಕಾರ್ಯಕ್ರಮವನ್ನು ಆಯೋಜಿಸಲಾಗುವುದು ಎಂದು ಉದ್ಯಮಿ ಬರೋಡ ಶಶಿಧರ ಶೆಟ್ಟಿ ತಿಳಿಸಿದರು.

ಪಟ್ಲ ಫೌಂಡೇಶನ್ ಟ್ರಸ್ಟ್ ನ ಸ್ಥಾಪಕಾಧ್ಯಕ್ಷರಾದ ಪಟ್ಲ ಸತೀಶ್ ಶೆಟ್ಟಿ ಅವರು ಮಾತನಾಡಿ ಯಕ್ಷಧ್ರುವ ಸಮುದ್ರಯಾನ ಬರೋಡ ಶಶಿಧರ ಶೆಟ್ಟಿಯವರ ಕಲ್ಪನೆಯಾಗಿದೆ ಎಂದರು. ಸಮುದ್ರಯಾನದಲ್ಲಿ ಟ್ರಸ್ಟ್ ನ ಮಹಾದಾನಿಗಳಾದ ಡಾ. ಕನ್ಯಾನ ಸದಾಶಿವ ಶೆಟ್ಟಿ, ಎಂಆರ್ ಜಿ ಗ್ರೂಪ್ ನ ಎಂಡಿ ಡಾ. ಕೆ ಪ್ರಕಾಶ್ ಶೆಟ್ಟಿ, ಭವಾನಿ ಶಿಪ್ಪಿಂಗ್ ನ ಆಡಳಿತ ನಿರ್ದೇಶಕರಾದ ಕುಸುಮೋದರ ಡಿ ಶೆಟ್ಟಿ ಸಹಿತ ಅನೇಕ ಮಂದಿ ಗಣ್ಯರು ಭಾಗವಹಿಸಲಿದ್ದಾರೆ ಎಂದು ಪಟ್ಲ ಸತೀಶ್ ಶೆಟ್ಟಿ ತಿಳಿಸಿದರು.

ಸಮುದ್ರಯಾನದ ಕುರಿತು ತ್ರಿರಂಗ ಸಂಗಮದ ಸಂಚಾಲಕ ಕರ್ನೂರು ಮೋಹನ್ ರೈ ಮತ್ತು ಟ್ರಸ್ಟ್ ನ ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ‌ ಭಂಡಾರಿ ಅಡ್ಯಾರ್ ಮಾಹಿತಿ ನೀಡಿದರು. ಸಮುದ್ರಯಾನದಲ್ಲಿ ಭಾಗವಹಿಸುವವರು ಪ್ರದೀಪ್ ಆಳ್ವ ಕದ್ರಿ 9964279525 ಅಥವಾ ಕರ್ನೂರು ಮೋಹನ್ ರೈ 9867304757 ಅವರನ್ನು ಸಂಪರ್ಕಿಸಬಹುದಾಗಿದೆ.

error: Content is protected !!