ಕಿನ್ಶಾಸಾ / ಕಂಪಾಲ: ಕೊರೊನಾ ವೈರಸ್‌ನ ಕರಾಳ ನೆನಪು ಮಾಸುವ ಮುನ್ನವೇ, ಜಗತ್ತಿನ ಅತ್ಯಂತ ಭೀಕರ ಹಾಗೂ ಪ್ರಾಣಾಂತಿಕ ವೈರಸ್‌ಗಳಲ್ಲಿ ಒಂದಾದ ʻಎಬೋಲಾ’ (Ebola Virus) ಮತ್ತೊಮ್ಮೆ ಅಬ್ಬರಿಸಲು ಆರಂಭಿಸಿದೆ! ಆಫ್ರಿಕಾದ ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೋ (DRC) ದೇಶದ ಪೂರ್ವ ಭಾಗದಲ್ಲಿ ಎಬೋಲಾ ಸಾಂಕ್ರಾಮಿಕ ರೋಗವು ಅತ್ಯಂತ ತೀವ್ರವಾಗಿ ಸ್ಫೋಟಗೊಂಡಿದೆ. ಪ್ರಸ್ತುತ ಹರಡುತ್ತಿರುವ ಈ ರೋಗವು ಕೇವಲ ಒಂದು ದೇಶಕ್ಕೆ ಸೀಮಿತವಾಗದೆ, ಅಂತರರಾಷ್ಟ್ರೀಯ ಗಡಿಗಳನ್ನು ದಾಟಿ ನೆರೆಹೊರೆಯ ದೇಶಗಳಿಗೂ ವ್ಯಾಪಿಸುತ್ತಿರುವುದು ಇಡೀ ಜಗತ್ತಿನ ಆರೋಗ್ಯ ಸಂಸ್ಥೆಗಳನ್ನು ತೀವ್ರ ಆತಂಕಕ್ಕೆ ತಳ್ಳಿದೆ.

ಆರೋಗ್ಯ ಅಧಿಕಾರಿಗಳು ಬಿಡುಗಡೆ ಮಾಡಿರುವ ಇತ್ತೀಚಿನ ಆಘಾತಕಾರಿ ವರದಿಯ ಪ್ರಕಾರ, ಕಾಂಗೋದ ಇಟುರಿ (Ituri Province) ಪ್ರಾಂತ್ಯದಲ್ಲಿ ಸದ್ಯ 246 ಶಂಕಿತ ಎಬೋಲಾ ಪ್ರಕರಣಗಳು ದಾಖಲಾಗಿವೆ. ಅತ್ಯಂತ ದಿಗಿಲು ಮೂಡಿಸುವ ಸಂಗತಿಯೆಂದರೆ, ಸೂಕ್ತ ಚಿಕಿತ್ಸೆ ಸಿಗದೆ ಈಗಾಗಲೇ ಸ್ಥಳೀಯ ಸಮುದಾಯಗಳಲ್ಲೇ 80 ಕ್ಕೂ ಹೆಚ್ಚು ಶಂಕಿತ ಜನರು ನರಳಿ ನರಳಿ ಸಾವನ್ನಪ್ಪಿದ್ದಾರೆ! ಇಟುರಿ ಪ್ರಾಂತ್ಯವು ಈಗಾಗಲೇ ಆಂತರಿಕ ಯುದ್ಧ ಮತ್ತು ಸಶಸ್ತ್ರ ಸಂಘರ್ಷಗಳಿಂದ ಜರ್ಜರಿತವಾಗಿದ್ದು, ಇಂತಹ ಕಠಿಣ ಪರಿಸ್ಥಿತಿಯ ನಡುವೆಯೇ ಎಬೋಲಾ ವೈರಸ್ ದಾಳಿ ಇಟ್ಟಟ್ಟಿರುವುದು ಅಲ್ಲಿನ ವೈದ್ಯಕೀಯ ವ್ಯವಸ್ಥೆಯನ್ನು ಸಂಪೂರ್ಣವಾಗಿ ಕುಸಿಯುವಂತೆ ಮಾಡಿದೆ.

ಈ ಎಬೋಲಾ ಸ್ಫೋಟವು ಕೇವಲ ಕಾಂಗೋಗೆ ಮಾತ್ರ ಕಂಟಕವಾಗಿ ಉಳಿದಿಲ್ಲ. ಇಟುರಿ ಪ್ರಾಂತ್ಯವು ಉಗಾಂಡಾ ಮತ್ತು ದಕ್ಷಿಣ ಸುಡಾನ್ ದೇಶಗಳ ಅಂತರರಾಷ್ಟ್ರೀಯ ಗಡಿಗೆ ಅತ್ಯಂತ ಹತ್ತಿರದಲ್ಲಿದೆ. ಇದೇ ಈಗ ದೊಡ್ಡ ಆಪತ್ತಿಗೆ ಕಾರಣವಾಗಿದೆ. ನೆರೆಹೊರೆಯ ದೇಶವಾದ ಉಗಾಂಡಾ ಈಗಾಗಲೇ ತನ್ನ ದೇಶದಲ್ಲೂ ಒಂದು ಅಧಿಕೃತ ಎಬೋಲಾ ಪ್ರಕರಣ ದಾಖಲಾಗಿರುವುದನ್ನು ಖಚಿತಪಡಿಸಿದೆ! ಕಾಂಗೋ ಮೂಲದ ಪ್ರಜೆಯೊಬ್ಬರು ಗಡಿ ದಾಟಿ ಉಗಾಂಡಾಕ್ಕೆ ಬಂದಾಗ ಅವರಲ್ಲಿ ವೈರಸ್ ಇರುವುದು ಪತ್ತೆಯಾಗಿದೆ. ಇದು ಗಡಿಯುದ್ದಕ್ಕೂ ವಾಸಿಸುವ ಲಕ್ಷಾಂತರ ಜನರ ಜೀವಕ್ಕೆ ನೇರ ಕಂಟಕ ತಂದಿಟ್ಟಿದೆ.

ಜಾಗತಿಕ ಅಲರ್ಟ್: ಏನಿದು ಎಬೋಲಾ ರಹಸ್ಯ?
ಎಬೋಲಾ ವೈರಸ್ ಮನುಷ್ಯನ ದೇಹವನ್ನು ಸೇರಿದರೆ ಬದುಕುಳಿಯುವ ಸಾಧ್ಯತೆ ಅತ್ಯಂತ ಕಡಿಮೆ ಇರುತ್ತದೆ. ಇದು ಸೋಂಕಿತ ವ್ಯಕ್ತಿಯ ದೇಹದ ದ್ರವಗಳ (ರಕ್ತ, ಜೊಲ್ಲು ಇತ್ಯಾದಿ) ನೇರ ಸಂಪರ್ಕದಿಂದ ಅತ್ಯಂತ ವೇಗವಾಗಿ ಹರಡುತ್ತದೆ. ಜ್ವರ, ತೀವ್ರ ನಿಶ್ಯಕ್ತಿ, ಸ್ನಾಯು ನೋವಿನಿಂದ ಆರಂಭವಾಗಿ ಕೊನೆಗೆ ದೇಹದ ಒಳಗಿನ ಮತ್ತು ಹೊರಗಿನ ಅಂಗಾಂಗಗಳಿಂದ ರಕ್ತಸ್ರಾವವಾಗಿ (Internal Bleeding) ಮನುಷ್ಯ ಅತ್ಯಂತ ಭೀಕರವಾಗಿ ಸಾವನ್ನಪ್ಪುತ್ತಾನೆ. ಸದ್ಯ ವಿಶ್ವ ಆರೋಗ್ಯ ಸಂಸ್ಥೆ (WHO) ಮತ್ತು ಸ್ಥಳೀಯ ಕಮಾಂಡೋ ಆರೋಗ್ಯ ತಂಡಗಳು ಉಗಾಂಡಾ ಮತ್ತು ಕಾಂಗೋ ಗಡಿಭಾಗದಲ್ಲಿ ಹೈ-ಅಲರ್ಟ್ ಘೋಷಿಸಿದ್ದು, ವೈರಸ್ ಇಡೀ ಆಫ್ರಿಕಾ ಖಂಡಕ್ಕೆ ಹರಡದಂತೆ ತಡೆಯಲು ಜಾಗತಿಕ ಮಟ್ಟದ ಕಾರ್ಯಾಚರಣೆ ಆರಂಭಿಸಿವೆ.
