ಮಕ್ಕಳ ಮೇಲೆ ಹರಿದು ಹೋದ ಖಾಸಗಿ ಸ್ಕೂಲ್‌ ಬಸ್‌; ಸ್ಥಳದಲ್ಲೇ ಒದ್ದಾಡಿ ಪ್ರಾಣ ಬಿಟ್ಟ ಇಬ್ಬರು ಮಕ್ಕಳು

ಬೆಂಗಳೂರು: ಖಾಸಗಿ ಶಾಲೆಯ ಬಸ್‌ ಚಾಲಕ ರಸ್ತೆ ತಿರುವಿನಲ್ಲಿ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಮಕ್ಕಳು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಹೆಣ್ಣೂರು ಸಂಚಾರ ಠಾಣೆ ವ್ಯಾಪ್ತಿಯಲ್ಲಿ ಬುಧವಾರ(ಫೆ.11) ಬೆಳಗ್ಗೆ ನಡೆದಿದೆ.

ಸಿಎಆರ್‌ ಕಾನ್‌ಸ್ಟೇಬಲ್‌ ನಾಗನಗೌಡ ಮಾಲಿ ಪಾಟೀಲ್‌ ಅವರ ಪುತ್ರಿ ವರ್ಷಾ(2) ಮತ್ತು ಸಹೋದರನ ಪುತ್ರಿ ಭಾನು(4) ಮೃತ ಮಕ್ಕಳು. ಖಾಸಗಿ ಶಾಲೆಯ ಬಸ್‌ ಚಾಲಕ ಮಾರಪ್ಪ(42) ಎಂಬಾತ ಬಂಧಿತ ವ್ಯಕ್ತಿ.

ಬುಧವಾರ ಬೆಳಗ್ಗೆ 8 ಗಂಟೆ ಸುಮಾರಿಗೆ ಇಬ್ಬರು ಮಕ್ಕಳನ್ನು ಬೈಕ್‌ನಲ್ಲಿ ಕೂರಿಸಿಕೊಂಡು ಹಾಲು ತರಲು ಹೋಗಿದ್ದರು. ಥಣಿಸಂದ್ರದ ಪಿಟಿಎಸ್‌ ಕಡೆಯಿಂದ ಹೆಗಡೆನಗರದ ಕಡೆಗೆ ಹೋಗಲು ಸೆಂಟ್ರಲ್‌ ರೆವಿನ್ಯೂ ಲೇಔಟ್‌ ಮುಖ್ಯರಸ್ತೆಯ ರಸ್ತೆ ತಿರುವಿನಲ್ಲಿ ಬಸ್‌ ಬರುವುದು ಕಂಡು ನಾಗನಗೌಡ ಬೈಕ್‌ ನಿಲ್ಲಿಸಿದ್ದಾರೆ. ಆದರೆ, ಖಾಸಗಿ ಬಸ್‌ ಚಾಲಕ ನಿಧಾನವಾಗಿ ತಿರುಗಿಸದೆ, ವೇಗವಾಗಿ ಬಸ್‌ ತಿರುಗಿಸಿದ್ದರಿಂದ ಬೈಕ್‌ಗೆ ಡಿಕ್ಕಿ ಹೊಡೆದಿದ್ದು, ನಾಗನಗೌಡ ಮತ್ತು ಇಬ್ಬರು ಮಕ್ಕಳು ಕೆಳಗೆ ಬಿದ್ದಿದ್ದಾರೆ. ಆದರೆ, ಇಬ್ಬರು ಮಕ್ಕಳ ಮೇಲೆ ಬಸ್‌ನ ಚಕ್ರಗಳು ಹರಿದಿದ್ದರಿಂದ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ ಎಂದು ಸಂಚಾರ ಪೊಲೀಸರು ಮಾಹಿತಿ ನೀಡಿದರು.

ಅಪಘಾತದ ದೃಶ್ಯ ಸ್ಥಳೀಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಹೆಣ್ಣೂರು ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

error: Content is protected !!