
ಬದೌನ್: ಸಾವಿರ ರೂಪಾಯಿಗಾಗಿ ವ್ಯಕ್ತಿಯೋರ್ವ ತನ್ನ ಹೆಂಡತಿಯನ್ನೇ ಸ್ನೇಹಿತರಿಗೆ ಮಾರಿರುವ ಘಟನೆಯೊಂದು ಉತ್ತರ ಪ್ರದೇಶದ ಬದೌನ್ ಜಿಲ್ಲೆಯಲ್ಲಿ ನಡೆದಿದೆ. ಇಬ್ಬರು ಸ್ನೇಹಿತರು ಆ ವ್ಯಕ್ತಿಯ ಪತ್ನಿಯ ಮೇಲೆ ಅತ್ಯಾಚಾರ ಎಸಗಿದ್ದು, ಘಟನೆಯ ನಂತರ ಮಹಿಳೆ ಪೊಲೀಸರಿಗೆ ದೂರು ನೀಡಿದ್ದಾರೆ.

ಪೊಲೀಸರು ಮಹಿಳೆಯ ಪತಿಯ ಇಬ್ಬರು ಸ್ನೇಹಿತರು ಮತ್ತು ಮಹಿಳೆಯ ಪತಿಯ ವಿರುದ್ಧ ಪ್ರಕರಣ ದಾಖಲಿಸಿಕೊಂಡು, ಸ್ನೇಹಿತರಾದಂತಹ ಬಾಲ್ಕಿಶನ್ ಮತ್ತು ಪಪ್ಪುವನ್ನು ಬಂಧಿಸಿದ್ದಾರೆ. ಮಹಿಳೆಯ ಪತಿಗಾಗಿ ಹುಡುಕಾಟ ನಡೆಯುತ್ತಿದೆ.
ಭಾನುವಾರ(ಫೆ.8) ಸಂಜೆ ಗ್ಯಾಸ್ ಏಜೆನ್ಸಿಗೆ ಹೋಗುತ್ತಿದ್ದಾಗ, ತನ್ನ ಪತಿ ಬಾಲ್ ಕಿಶನ್ ಮತ್ತು ಪಪ್ಪು ಎಂಬ ಯುವಕರಿಂದ ಒಂದು ಸಾವಿರ ರೂಪಾಯಿಗಳನ್ನು ತೆಗೆದುಕೊಂಡು ತನ್ನನ್ನು ಅವರೊಂದಿಗೆ ಕಳುಹಿಸಿದ್ದಾನೆ ಎಂದು ಮಹಿಳೆ ಆರೋಪಿಸಿದ್ದಾರೆ.

ಪೊಲೀಸರ ಪ್ರಕಾರ, ಮಹಿಳೆ ತನ್ನ ಗಂಡನ ಸ್ನೇಹಿತರೊಂದಿಗೆ ಹಿಂದಿರುಗುತ್ತಿದ್ದಾಗ, ಇಬ್ಬರೂ ತನ್ನನ್ನು ತೋಟಕ್ಕೆ ಎಳೆದೊಯ್ದು ಅತ್ಯಾಚಾರ ಮಾಡಿದ್ದಾರೆ. ಘಟನೆ ನಂತರ ಮಹಿಳೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಅದರ ಆಧಾರದ ಮೇಲೆ ಬಾಲ್ ಕಿಶನ್, ಪಪ್ಪು ಮತ್ತು ಮಹಿಳೆಯ ಪತಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಸೋಮವಾರ(ಫೆ.9) ಪೊಲೀಸರು ಮಹಿಳೆಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.