ಖಾಸಗಿ ಬಸ್ಸುಗಳ ʻಮೃತ್ಯು ಸರ್ಕಸ್’ಗೆ ಬೀಳಲಿದೆ ಬ್ರೇಕ್! – ಮಂಗಳೂರಿನ ರಸ್ತೆಗಿಳಿಯಲಿವೆ ಕೆಎಸ್‌ಆರ್‌ಟಿಸಿ ಆನೆಗಳು!

ಮಂಗಳೂರು: ಮಂಗಳೂರಿನ ಆ ರಸ್ತೆಗಳ ಮೇಲೆ ಒಮ್ಮೆ ಕಣ್ಣಾಡಿಸಿ. ಅಲ್ಲಿ ಓಡುವುದು ಬಸ್ಸುಗಳಲ್ಲ, ಸಾಕ್ಷಾತ್ ಯಮನ ವಾಹನಗಳು! ಒಂದು ಸೆಕೆಂಡ್ ಟೈಮ್ ಮಿಸ್ಸಾದ್ರೂ ಸಾಕು, ಕಂಡಕ್ಟರ್‌ಗಳ ಮಧ್ಯೆ ಅಶ್ಲೀಲ ಪದಗಳ ಜಗಳ, ರಸ್ತೆಯ ಮಧ್ಯದಲ್ಲೇ ಬಸ್ ನಿಲ್ಲಿಸಿ ಒಬ್ಬರನ್ನೊಬ್ಬರು ಓವರ್‌ಟೇಕ್ ಮಾಡುವ ಆ ಅಪಾಯಕಾರಿ ಸರ್ಕಸ್… ಅಬ್ಬಾ! ಮಂಗಳೂರಿನ ಜನ ಈ ಪ್ರೈವೇಟ್ ಬಸ್ಸುಗಳ ʻಒಟ್ರಾಸಿ’ ವರ್ತನೆಗೆ ಬೇಸತ್ತು ಹೋಗಿದ್ದರು.

ಆದರೆ ಈಗ ಕಾಲ ಬದಲಾಗಿದೆ. ಸುಮಾರು ಮೂರು ದಶಕಗಳ ಕಾಲ ಕೆಎಸ್‌ಆರ್‌ಟಿಸಿ ಬಸ್ಸುಗಳನ್ನು ನಗರದ ಒಳಗೆ ಬರಲು ಬಿಡದಿದ್ದ ಆ ಹಳೆಯ ಅಧಿಸೂಚನೆಗೆ ಈಗ ಜಿಲ್ಲಾಧಿಕಾರಿಗಳು ಎಳ್ಳುನೀರು ಬಿಟ್ಟಿದ್ದಾರೆ.

ಶಕ್ತಿ ಯೋಜನೆ ಈಗ ಸಿಟಿಯ ಒಳಗೂ ಘರ್ಜಿಸಲಿದೆ!
ಇಲ್ಲಿಯವರೆಗೆ ಬಡ ಮಹಿಳೆಯರಿಗೆ, ವಿದ್ಯಾರ್ಥಿಗಳಿಗೆ ಸರ್ಕಾರದ ʻಶಕ್ತಿ’ ಯೋಜನೆ ಕೇವಲ ದೂರದ ಊರಿನ ಬಸ್ಸುಗಳಿಗೆ ಮಾತ್ರ ಸೀಮಿತವಾಗಿತ್ತು. ಮಂಗಳೂರು ಸಿಟಿಯ ಒಳಗೆ ಸಂಚರಿಸಬೇಕಾದರೆ ಅದೇ ಕೆಂಪು-ಹಳದಿ ಬಣ್ಣದ ಖಾಸಗಿ ಬಸ್ಸುಗಳಿಗೆ ಜೇಬಿನಿಂದ ಕಾಸು ಕೊಡಲೇಬೇಕಿತ್ತು. ಆದರೆ ಇನ್ಮುಂದೆ ಹಾಗಲ್ಲ. ಸಾರ್ವಜನಿಕ ಆಸ್ಪತ್ರೆಗೆ ಬರುವ ರೋಗಿಗಳು, ಶಾಲೆಗೆ ಹೋಗುವ ಮಕ್ಕಳು ಮತ್ತು ಮಹಿಳೆಯರು ರಾಜಾತಿರಾಜನಂತೆ ಕೆಎಸ್‌ಆರ್‌ಟಿಸಿ ಬಸ್ಸುಗಳಲ್ಲಿ ಓಡಾಡಬಹುದು.

ಟೈಮ್ ಕೀಪರ್‌ಗಳ ದರ್ಬಾರ್‌ಗೆ ಇತಿಶ್ರೀ?
ರಸ್ತೆ ಮಧ್ಯೆ ನಿಂತು ಹತ್ತು ರೂಪಾಯಿಗೋಸ್ಕರ ಕಿರುಚುವ ಆ ಟೈಮ್ ಕೀಪರ್‌ಗಳು, ಕಂಡಕ್ಟರ್‌ಗಳ ಆ ದುರಹಂಕಾರದ ಮಾತುಗಳಿಗೆ ಇನ್ನು ಕಡಿವಾಣ ಬೀಳುವ ಲಕ್ಷಣ ಕಾಣುತ್ತಿದೆ. ಖಾಸಗಿ ಬಸ್ಸುಗಳ ಅಟ್ಟಹಾಸದಿಂದ ರೋಸಿ ಹೋಗಿದ್ದ ಸಾರ್ವಜನಿಕರಿಗೆ ಕೆಎಸ್‌ಆರ್‌ಟಿಸಿ ಬಸ್ಸುಗಳು ಒಂದು ಸುಖದ ಆಸರೆಯಾಗಲಿವೆ. ನಗರದ ಟ್ರಾಫಿಕ್ ಕಡಿಮೆ ಮಾಡಲು ಮತ್ತು ಸುರಕ್ಷಿತ ಪ್ರಯಾಣಕ್ಕೆ ಇದು ಜಿಲ್ಲಾಡಳಿತ ತಡವಾಗಿ ಕೈಗೊಂಡಿದ್ದರೂ ಸರಿಯಾದ ನಿರ್ಧಾರ ಕೈಗೊಂಡಿದೆ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ.

error: Content is protected !!