ಮಂಗಳೂರು: ಕರಾವಳಿಯ ತುಳು ಚಿತ್ರರಂಗ ಮತ್ತು ರಂಗಭೂಮಿ ಕಲಾವಿದರ ಬಹುನಿರೀಕ್ಷಿತ ‘ದಶ ಯಾತ್ರೆ’ ಸಂಭ್ರಮೋತ್ಸವವು ಫೆಬ್ರವರಿ 11ರಿಂದ 15ರವರೆಗೆ ಮಂಗಳೂರಿನ ನೆಹರೂ ಮೈದಾನದಲ್ಲಿ ಕ್ರಿಕೆಟ್ ಹಬ್ಬ ಹಾಗೂ ಸನ್ಮಾನ ಕಾರ್ಯಕ್ರಮಗಳೊಂದಿಗೆ ಅದ್ದೂರಿಯಾಗಿ ನಡೆಯಲಿದೆ ಎಂದು ಕೋಸ್ಟಲ್‌ವುಡ್ ಕಲಾವಿದರ ಮತ್ತು ತಂತ್ರಜ್ಞರ ಸಹಕಾರಿ ಒಕ್ಕೂಟ (ರಿ.)ದ ಅಧ್ಯಕ್ಷ ಲಂಚು ಲಾಲ್ ಕೆ.ಎಸ್ ಅವರು ಮಂಗಳೂರಿನ ಪ್ರೆಸ್‌ಕ್ಲಬ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.


ಕೋಸ್ಟಲ್‌ವುಡ್ ಕಲಾವಿದರ ಮತ್ತು ತಂತ್ರಜ್ಞರ ಸಹಕಾರಿ ಒಕ್ಕೂಟದ ಆಶ್ರಯದಲ್ಲಿ ಆಯೋಜಿಸಲಾದ ಈ ಐದು ದಿನಗಳ ಉತ್ಸವದಲ್ಲಿ ತುಳು ಚಿತ್ರರಂಗ ಮತ್ತು ರಂಗಭೂಮಿ ಕಲಾವಿದರಿಗಾಗಿ ವಿಶೇಷವಾಗಿ ‘ಕ್ರಿಕೆಟ್ ಹಬ್ಬ’ ಆಯೋಜಿಸಲಾಗಿದ್ದು, ಇದರೊಂದಿಗೆ ವಿವಿಧ ಕ್ಷೇತ್ರಗಳಲ್ಲಿ ಗಮನಾರ್ಹ ಸಾಧನೆ ಮಾಡಿದ ಸಾಧಕರಿಗೆ ಗೌರವಪೂರ್ವಕ ಸನ್ಮಾನ ಕಾರ್ಯಕ್ರಮವೂ ನಡೆಯಲಿದೆ. ಪ್ರತಿದಿನ ಬೆಳಿಗ್ಗೆ 7.30ರಿಂದ ರಾತ್ರಿ 11 ಗಂಟೆಯವರೆಗೆ ಪಂದ್ಯಾಟಗಳು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.

ಉದ್ಘಾಟನಾ ಸಮಾರಂಭ:
ಫೆಬ್ರವರಿ 11ರಂದು ಸಂಜೆ 5.30ಕ್ಕೆ ನೆಹರೂ ಮೈದಾನದಲ್ಲಿ ಉದ್ಘಾಟನಾ ಸಮಾರಂಭ ನಡೆಯಲಿದ್ದು, ಮಾಜಿ ಸಚಿವ ಕೃಷ್ಣ ಜೆ. ಪಾಲೇಮಾರ್ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಮಂಗಳೂರು ದಕ್ಷಿಣ ಶಾಸಕ ಡಿ. ವೇದವ್ಯಾಸ್ ಕಾಮತ್ ಅಧ್ಯಕ್ಷತೆ ವಹಿಸಲಿದ್ದಾರೆ.
ಸಮಾರಂಭದಲ್ಲಿ ಎಸ್‌ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ. ಎಂ.ಎನ್. ರಾಜೇಂದ್ರ ಕುಮಾರ್, ಕಾಪು ಶಾಸಕ ಸುರೇಶ್ ಶೆಟ್ಟಿ ಗುರ್ಮೆ, ವಿಠಲ ಶೆಟ್ಟಿ ಫೌಂಡೇಶನ್ ಸ್ಥಾಪಕ ರಾಕೇಶ್ ಅಣ್ಣ ಶೆಟ್ಟಿ, ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಪುತ್ತೂರು, ಜಿಲ್ಲಾಧಿಕಾರಿ ದರ್ಶನ್ ಹೆಚ್.ವಿ., ನಗರ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ, ಮಾಜಿ ಶಾಸಕ ಮೋಯ್ದಿನ್ ಬಾವ ಸೇರಿದಂತೆ ಹಲವು ರಾಜಕೀಯ ನಾಯಕರು ಹಾಗೂ ತುಳು ಚಿತ್ರರಂಗದ ಗಣ್ಯರು ಭಾಗವಹಿಸಲಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಗೌರವ ಅಧ್ಯಕ್ಷ ಕಿಶೋರ್ ಡಿ. ಶೆಟ್ಟಿ, ಮಾಜಿ ಅಧ್ಯಕ್ಷರಾದ ಪಮ್ಮಿ ಕೋಡಿಯಾಲ್ ಬೈಲ್ ಮತ್ತು ಮೋಹನ್ ಕೊಪ್ಪಳ, ಪ್ರಧಾನ ಕಾರ್ಯದರ್ಶಿ ಸುಧಾಕರ್ ಶೆಟ್ಟಿ ಬೆದ್ರ, ಅನಿಲ್ ಕರ್ಕೇರ ಖಜಾಂಜಿ, ಕಮಿಟಿ ಸದಸ್ಯ ಜಿತೇಶ್ ಉಳಿಯ ಉಪಸ್ಥಿತರಿದ್ದರು.

ಒಕ್ಕೂಟದ ಬಗ್ಗೆ
ಹತ್ತು ವರ್ಷಗಳ ಹಿಂದೆ ಸ್ಥಾಪಕಾಧ್ಯಕ್ಷೆ ಅಶ್ವಿನಿ ಕೋಟ್ಯಾನ್ ಅವರ ಅಧ್ಯಕ್ಷತೆಯಲ್ಲಿ ಆರಂಭಗೊಂಡ ಕೋಸ್ಟಲ್‌ವುಡ್ ಕಲಾವಿದರ ಮತ್ತು ತಂತ್ರಜ್ಞರ ಸಹಕಾರಿ ಒಕ್ಕೂಟವು ಈ ವರ್ಷ ತನ್ನ 10ನೇ ವರ್ಷದ ಸಂಭ್ರಮೋತ್ಸವವನ್ನು ಆಚರಿಸುತ್ತಿದೆ. ಕಲಾವಿದರನ್ನು ಒಗ್ಗೂಡಿಸುವ ಉದ್ದೇಶದಿಂದ ನಿರಂತರ ಕ್ರಿಕೆಟ್ ಪಂದ್ಯಾಟಗಳ ಮೂಲಕ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬರುತ್ತಿರುವ ಒಕ್ಕೂಟವು, ಇದುವರೆಗೆ ಅಸಕ್ತ ಕಲಾವಿದರಿಗೆ ಸುಮಾರು 20 ಲಕ್ಷ ರೂಪಾಯಿಗೂ ಅಧಿಕ ಆರ್ಥಿಕ ಸಹಾಯ ನೀಡಿದೆ. ಜೊತೆಗೆ ರಕ್ತದಾನ ಶಿಬಿರಗಳು, ತುಳು ಚಿತ್ರರಂಗದ ನೂರು ಚಿತ್ರಗಳ ನಿರ್ಮಾಣದ ಶತ ಸಂಭ್ರಮಾಚರಣೆ ಹಾಗೂ ಪ್ರತೀ ತುಳು ಚಿತ್ರ ಬಿಡುಗಡೆ ಸಂದರ್ಭದಲ್ಲಿ ಒಂದು ಪ್ರದರ್ಶನವನ್ನು ಆಯೋಜಿಸುವ ಕಾರ್ಯವನ್ನು ಮಾಡುತ್ತಿದೆ.
ಅಶ್ವಿನಿ ಕೋಟ್ಯಾನ್, ಪಮ್ಮಿ ಕೋಡಿಯಾಲ್ ಬೈಲ್, ಮೋಹನ್ ಕೊಪ್ಪಳ ಕದ್ರಿ, ಪ್ರಕಾಶ್ ಶೆಟ್ಟಿ ಧರ್ಮನಗರ ಅವರುಗಳ ಬಳಿಕ ಪ್ರಸ್ತುತ ಲಂಚು ಲಾಲ್ ಕೆ.ಎಸ್ ಅವರು ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದು, ಒಕ್ಕೂಟದಲ್ಲಿ 300ಕ್ಕೂ ಹೆಚ್ಚು ಕಲಾವಿದರು ಸದಸ್ಯರಾಗಿದ್ದಾರೆ.
