‘ವಾಗಾಂಚೊ ಖೇಳ್’ ಮೊದಲ ಹಾಡು ಫೆ.14ಕ್ಕೆ ಬಿಡುಗಡೆ – ಮೇ 1ರಂದು ಚಿತ್ರ ಪ್ರದರ್ಶನ

ಮಂಗಳೂರು: ಸನ್ ಶೈನ್ ಕ್ರಿಯೇಷನ್ ನಿರ್ಮಾಣ ಸಂಸ್ಥೆಯ ಬ್ಯಾನರ್‌ನಲ್ಲಿ ಪ್ರವೀಣ್ ಫರ್ನಾಂಡಿಸ್ ನಿರ್ಮಾಣ ಹಾಗೂ ಅರ್ವಿನ್ ಲೋಬೊ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಬಹುನಿರೀಕ್ಷಿತ ಕೊಂಕಣಿ ಚಲನಚಿತ್ರ ‘ವಾಗಾಂಚೊ ಖೇಳ್’ (Vaganso Khel) ಚಿತ್ರದ ಮೊದಲ ಹಾಡು “ಮೊಗ್ ಜಾಲಾ” ಫೆಬ್ರವರಿ 14ರಂದು ಪ್ರೇಮಿಗಳ ದಿನಾಚರಣೆಯಂದು ಸನ್ ಶೈನ್ ಕ್ರಿಯೇಷನ್ ಯೂಟ್ಯೂಬ್ ಚಾನೆಲ್‌ನಲ್ಲಿ ಬಿಡುಗಡೆಗೊಳ್ಳಲಿದೆ ಎಂದು ನಿರ್ದೇಶಕ ಅರ್ವಿನ್ ಲೋಬೊ ತಿಳಿಸಿದ್ದಾರೆ.

ಅವರು ಮಂಗಳೂರಿನ ಪ್ರೆಸ್‌ಕ್ಲಬ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕರಾವಳಿ ಭಾಗದ ವಿಶಿಷ್ಟ ಸಂಸ್ಕೃತಿಯಾದ ಹುಲಿವೇಷ ಹಾಗೂ ಕೈಂ ಸಂಸ್ಕೃತಿಯನ್ನು ಆಧರಿಸಿದ ಈ ಚಿತ್ರದಲ್ಲಿ ಕೊಂಕಣಿ, ತುಳು, ಬ್ಯಾರಿ ಮತ್ತು ಕನ್ನಡ ಭಾಷೆಗಳ ಬಳಕೆ ಮಾಡಲಾಗಿದೆ. ಪ್ರೇಕ್ಷಕರಿಗೆ ಹೊಸ ಅನುಭವ ನೀಡುವ ವಿಭಿನ್ನ ಕಥಾವಸ್ತು ಈ ಚಿತ್ರದ ಪ್ರಮುಖ ಆಕರ್ಷಣೆಯಾಗಲಿದೆ ಎಂದು ಅವರು ಹೇಳಿದರು.

“ಮೊಗ್ ಜಾಲಾ” ಹಾಡಿಗೆ ಡೋಲ್ವಿನ್ ಕೊಳಲಗಿರಿ ಸಂಗೀತ ಸಂಯೋಜನೆ ಮಾಡಿದ್ದು, ಪ್ರವೀಣ್ ಫರ್ನಾಂಡಿಸ್ ಸಾಹಿತ್ಯ ರಚಿಸಿದ್ದಾರೆ. ಈ ಹಾಡನ್ನು ಪ್ರಜೋತ್ ಡೇಸ ಹಾಗೂ ಜಾಸ್ಮಿನ್ ಡಿಸೋಜ ಅವರು ಹಾಡಿದ್ದಾರೆ. ‘ವಾಗಾಂಚೊ ಖೇಳ್’ ಚಿತ್ರವು ಮೇ 1ರಂದು ತುಳುನಾಡಿನಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದ್ದು, ಏಪ್ರಿಲ್ 17ರಿಂದ ಪ್ರೀ–ಪ್ರೀಮಿಯರ್ ಶೋಗಳನ್ನು ಆಯೋಜಿಸಲಾಗುತ್ತದೆ. ಶೋಗಳ ನಿಖರ ದಿನಾಂಕವನ್ನು ಮುಂದಿನ ದಿನಗಳಲ್ಲಿ ಘೋಷಿಸಲಾಗುವುದು ಎಂದು ತಿಳಿಸಿದರು.

ಚಿತ್ರದ ಬಗ್ಗೆ:
ಈ ಚಿತ್ರದಲ್ಲಿ ಡೊಲ್ಲಾ ಮಂಗೂರು, ಅಡ್ರಿನ್ ಡಿ’ಕುನ್ಹ, ಕ್ಲಿಯೋನ ಡಿʼಸೋಜ, ವಿಯೋಲ ಡಿʼಸೋಜ, ಅನೂಪ್ ಹ್ಯಾರಿಕ್, ಜೆರೋಮ್ ಮೊರಾಸ್, ನೋರ್ಬಟ್ ಜಾನ್, ಪ್ರಶಾಂತ್ ಸಿ.ಕೆ., ಫ್ರಾನ್ಸಿಸ್ ಪ್ರೀತಮ್, ರೈಸನ್ ಸೇರಿದಂತೆ ಹಲವರು ನಟಿಸಿದ್ದಾರೆ.

ಚಿತ್ರದ ಕಥೆ, ಚಿತ್ರಕಥೆ, ಸಂಭಾಷಣೆ ಹಾಗೂ ಸಂಕಲನವನ್ನು ನಿರ್ದೇಶಕ ಅರ್ವಿನ್ ಲೋಬೊ ಅವರು ನಿರ್ವಹಿಸಿದ್ದಾರೆ. ಡೇನೆಲ್ ಜೆಸನ್ ಛಾಯಾಗ್ರಹಣ, ಡೋಲ್ವಿನ್ ಕೊಳಲಗಿರಿ ಸಂಗೀತ ನಿರ್ದೇಶನ ಮಾಡಿದ್ದಾರೆ. ಸೀಮಾ ಫರ್ನಾಂಡಿಸ್ ಹಾಗೂ ನೋರ್ಬಟ್ ಜಾನ್ ಸಹ ನಿರ್ಮಾಪಕರಾಗಿ ಕಾರ್ಯನಿರ್ವಹಿಸಿದ್ದು, ನೋರ್ಬಟ್ ಜಾನ್ ಅವರು ಸಹ-ನಿರ್ದೇಶಕ ಹಾಗೂ ನಿರ್ಮಾಣ ವ್ಯವಸ್ಥಾಪಕರ ಜವಾಬ್ದಾರಿಯನ್ನೂ ವಹಿಸಿಕೊಂಡಿದ್ದಾರೆ. ಚಿತ್ರದ ಪ್ರಚಾರ ಕಲೆಯನ್ನು ಪವನ್ ಆಚಾರ್ಯ ಬೋಳೂರು ರೂಪಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಡೋಲ್ವಿನ್ ಕೊಳಲಗಿರಿ, ಕ್ಲಿಯೋನ ಡಿಸೋಜ, ಅರ್ವಿನ್ ಲೋಬೊ ಸೇರಿದಂತೆ ಚಿತ್ರತಂಡದ ಸದಸ್ಯರು ಉಪಸ್ಥಿತರಿದ್ದರು.

error: Content is protected !!