ಮಂಗಳೂರು: ಪದವು ಫ್ರೆಂಡ್ಸ್ ಕ್ಲಬ್ (PFC) ತನ್ನ ಸ್ವರ್ಣ ವಾರ್ಷಿಕೋತ್ಸವವನ್ನು ಫೆಬ್ರವರಿ 13ರಿಂದ 17ರವರೆಗೆ ಶಕ್ತಿನಗರ ಸರಕಾರಿ ಪ್ರೌಢ ಶಾಲಾ ಮೈದಾನದಲ್ಲಿ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಆಚರಿಸಲಿದೆ ಎಂದು ಕ್ಲಬ್ ಅಧ್ಯಕ್ಷ ಶ್ರೀ ಕುಶಾಲ್ ಕುಮಾರ್ ಕೆ. ಅವರು ಮಂಗಳೂರಿನ ಪ್ರೆಸ್‌ಕ್ಲಬ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಸಾಮಾಜಿಕ, ಶೈಕ್ಷಣಿಕ, ಕ್ರೀಡಾ ಹಾಗೂ ಧಾರ್ಮಿಕ ಕ್ಷೇತ್ರಗಳಲ್ಲಿ ಸಕ್ರಿಯವಾಗಿ ಸೇವೆ ಸಲ್ಲಿಸುತ್ತಿರುವ ಪದವು ಫ್ರೆಂಡ್ಸ್ ಕ್ಲಬ್, ಶಕ್ತಿನಗರ ಪರಿಸರದ ಹೆಮ್ಮೆಯ ಸಂಸ್ಥೆಯಾಗಿ ಬೆಳೆದಿದೆ. ಸ್ಥಳೀಯ ಸರಕಾರಿ ಶಾಲೆಗಳೊಂದಿಗೆ ನಿಕಟ ಸಂಪರ್ಕ ಹೊಂದಿರುವ ಸಂಸ್ಥೆ, ಪ್ರತಿವರ್ಷ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ, ಪ್ರತಿಭಾ ಪ್ರದರ್ಶನಕ್ಕೆ ವೇದಿಕೆ ಕಲ್ಪಿಸುವುದರೊಂದಿಗೆ ಶಿಕ್ಷಣ ಕ್ಷೇತ್ರಕ್ಕೆ ಮಹತ್ವದ ಕೊಡುಗೆ ನೀಡುತ್ತಿದೆ. ಶಕ್ತಿನಗರದಲ್ಲಿ ಪ್ರೌಢ ಶಾಲೆ ಹಾಗೂ ಪದವಿ ಪೂರ್ವ ಕಾಲೇಜು ಸ್ಥಾಪನೆಗೆ ಸಂಸ್ಥೆಯ ನಿರಂತರ ಪ್ರಯತ್ನ ಪ್ರಮುಖ ಪಾತ್ರ ವಹಿಸಿದೆ ಎಂದು ಅವರು ಹೇಳಿದರು.

ಸ್ವರ್ಣ ಸಂಭ್ರಮದ ಅಂಗವಾಗಿ ಕಳೆದ ಏಪ್ರಿಲ್‌ನಿಂದ ವರ್ಷಪೂರ್ತಿ ಗಣಹೋಮ, ಸತ್ಯನಾರಾಯಣ ಪೂಜೆ, ಹರಿಕಥಾ, ಕ್ರೀಡಾ ಸ್ಪರ್ಧೆಗಳು, ಕ್ರಿಕೆಟ್ ಪಂದ್ಯಾಟ, ಪುಡ್ ಫೆಸ್ಟಿವಲ್ ಸೇರಿದಂತೆ ಅನೇಕ ಧಾರ್ಮಿಕ, ಕ್ರೀಡಾ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಕಾರ್ಯಕ್ರಮಗಳ ವಿವರ:
ಫೆ.13: ಸ್ಥಳೀಯ ಸರಕಾರಿ ಶಾಲೆ ಹಾಗೂ ಕಾಲೇಜು ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು, ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ 600ಕ್ಕೂ ಅಧಿಕ ಬಹುಮಾನ ವಿತರಿಸಲಾಗುವುದು. ತಾಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ಸಾಧನೆಗೈದ ವಿದ್ಯಾರ್ಥಿಗಳಿಗೆ ವಿಶೇಷ ಪುರಸ್ಕಾರ ನೀಡಲಾಗುವುದು.
ಫೆ.14: ಶ್ರೀ ಕೃಷ್ಣ ಭಜನಾ ಮಂದಿರದ ಅಧ್ಯಕ್ಷ ಶ್ರೀ ಸುಂದರ್ ಅಂಚನ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಹಿರಿಯ ಕಲಾವಿದೆ ಶ್ರೀಮತಿ ಸರೋಜಿನಿ ಶೆಟ್ಟಿ ಅವರಿಗೆ ‘ದಿ. ಮಾಧವ ಕೆ. ಶಕ್ತಿನಗರ ಸ್ಮಾರಕ ಪ್ರಶಸ್ತಿ’ ಪ್ರದಾನ ಮಾಡಲಾಗುವುದು. ಖ್ಯಾತ ಹಾಸ್ಯ ಕಲಾವಿದ ಅರವಿಂದ ಬೋಳಾರ್‌ರವರಿಗೆ ವಿಶೇಷ ಸನ್ಮಾನ ನಡೆಯಲಿದೆ. ಲಕುಮಿ ತಂಡದಿಂದ “ಆಂಟಿ ಬೊಕ್ಕ ಅಂಕಲ್” ತುಳು ಹಾಸ್ಯ ನಾಟಕ ಪ್ರದರ್ಶನಗೊಳ್ಳಲಿದೆ.

ಫೆ.15: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ ಕಾರ್ಯಕ್ರಮ ಉದ್ಘಾಟಿಸಲಿದ್ದು, ದುಬೈಯ ಉದ್ಯಮಿ ಹಾಗೂ ಸಮಾಜಸೇವಕ ಶ್ರೀ ಹರೀಶ್ ಶೇರಿಗಾರ್ ದಂಪತಿಗಳನ್ನು ಸನ್ಮಾನಿಸಲಾಗುವುದು. ಸಂಜೆ “ಪಿ.ಎಫ್.ಸಿ. ಸ್ವರ್ಣ ಸಂಗೀತ ಸಂಭ್ರಮ” ರಸಮಂಜರಿ ಕಾರ್ಯಕ್ರಮ ನಡೆಯಲಿದೆ.
ಫೆ.16: ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಶ್ರೀ ಮಾಲಾಡಿ ಅಜಿತ್ ಕುಮಾರ್ ರೈ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಖ್ಯಾತ ನಾಟಕಕಾರ ದೇವದಾಸ್ ಕಾಪಿಕಾಡ್ ಮತ್ತು ವಿಜಯ್ ಕುಮಾರ್ ಕೊಡಿಯಾಲ್‌ಬೈಲ್ ಅವರಿಗೆ ಬಿರುದು ಪ್ರದಾನ ಮಾಡಲಾಗುವುದು. ವಿಧಾತ್ರಿ ತಂಡದಿಂದ “ಜೈ ಹನುಮಾನ್” ತುಳು ಭಕ್ತಿನಾಟಕ ನಡೆಯಲಿದೆ.
ಫೆ.17: ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಶ್ರೀ ಉಮೇಶ ಪಂಬದರಿಗೆ ಸನ್ಮಾನ ನಡೆಯಲಿದ್ದು, ಸಂಸ್ಥೆಗೆ ಸ್ಥಳದಾನ ಮಾಡಿದ ತಿಮ್ಮಪೈ ಕುಟುಂಬ ಹಾಗೂ ಪೋಷಕ ಶ್ರೀ ದಿವಾಣ ಗೋವಿಂದ ಭಟ್ ಅವರನ್ನು ಗೌರವಿಸಲಾಗುವುದು. ಹನುಮಗಿರಿ ಮೇಳದಿಂದ “ಶ್ವೇತಕುಮಾರ ಚರಿತ್ರೆ – ವೀರ ಅಭಿಮನ್ಯು” ಯಕ್ಷಗಾನ ಪ್ರದರ್ಶನ ನಡೆಯಲಿದೆ.
ಪತ್ರಿಕಾಗೋಷ್ಠಿಯಲ್ಲಿ ಸ್ವರ್ಣ ಸಂಭ್ರಮ ಸಮಿತಿಯ ಅಧ್ಯಕ್ಷ ಶ್ರೀ ಜಾನ್ಸನ್, ಕಾರ್ಯದರ್ಶಿ ಶ್ರೀ ರಾಮಕೃಷ್ಣ ಭಟ್, ಸಂಚಾಲಕ ಶ್ರೀ ಅಶೋಕ್ ನಾಯಕ್, ಲೆಕ್ಕ ಪರಿಶೋಧಕ ಶ್ರೀ ರವೀಂದ್ರ ರೈ, ಪ್ರಧಾನ ಕಾರ್ಯದರ್ಶಿ ಶ್ರೀ ಪ್ರಸಾದ್ ಟಿ. ಹಾಗೂ ಸಂಚಾಲಕ ಶ್ರೀ ಹರೀಶ್ ಕುಮಾರ್ ಜೋಗಿ ಉಪಸ್ಥಿತರಿದ್ದರು.
