ಮಂಗಳೂರು: ರಾಜಕೀಯದಲ್ಲಿ ಯಾರು ಯಾರಿಗೆ ಮಿತ್ರ? ಯಾರು ಯಾರಿಗೆ ಶತ್ರು? ಅದೆಲ್ಲಾ ಹೊಟ್ಟೆ ಹಸಿದಾಗ ಗೊತ್ತಾಗುವ ಸತ್ಯ. ಇಷ್ಟು ದಿನ ರಷ್ಯಾ ನಮಗೆ ʻಜಿಗರಿ ದೋಸ್ತ್’ ಆಗಿತ್ತು. ಉಕ್ರೇನ್ ಮೇಲೆ ಪುಟಿನ್ ಸಾಹೇಬರು ಯುದ್ಧ ಸಾರಿದಾಗ ಜಗತ್ತೇ ಅವರನ್ನ ವಿಲನ್ ಅಂದಿತ್ತು. ಆದರೆ ನಾವು ಮಾತ್ರ ರಷ್ಯಾದ ಜೊತೆ ನಿಂತು, ಅವರ ಹತ್ತಿರ ಅಗ್ಗದ ಬೆಲೆಗೆ ತೈಲ ತಂದು ನಮ್ಮ ದೇಶದ ಗಾಡಿ ಓಡಿಸಿದ್ವಿ. ಆದರೆ ಈಗ ಕಾಲ ಬದಲಾಗಿದೆ…

ವಾಷಿಂಗ್ಟನ್‌ನಲ್ಲಿ ಕುಳಿತಿರೋ ಡೊನಾಲ್ಡ್ ಟ್ರಂಪ್ ಎಂಬ ಹಠಮಾರಿ ಮನುಷ್ಯ ಭಾರತದ ಕತ್ತಿಗೆ ಕೈ ಹಾಕಿದ್ದಾರೆ. “ಒಂದೋ ರಷ್ಯಾನ ಬಿಡಿ, ಇಲ್ಲಾಂದ್ರೆ ನಮ್ಮ ಮಾರ್ಕೆಟ್‌ಗೆ ಬರಬೇಡಿ” ಅನ್ನೋದು ಅವರ ಆರ್ಡರ್!
ಅಸಲಿಗೆ ಭಾರತ ತೈಲ ಆಮದು ನಿಲ್ಲಿಸಿದೆಯಾ?
ನೋಡಿ, ಭಾರತಕ್ಕೆ ಬೇರೆ ದಾರಿಯೇ ಇಲ್ಲದಂತಾಗಿದೆ. ಅಮೆರಿಕ ನಮಗೆ ಕೊಡುತ್ತಿರುವ ಆ ಶೇ. 18ರಷ್ಟು ಟ್ಯಾಕ್ಸ್ ಆಫರ್ ಇದೆಯಲ್ಲ, ಅದು ನಮ್ಮ ಉದ್ಯಮಿಗಳಿಗೆ ಅಮೃತವಿದ್ದಂತೆ. ಅದನ್ನ ತಗೊಳ್ಳಬೇಕು ಅಂದ್ರೆ ರಷ್ಯಾದ ತೈಲಕ್ಕೆ ಟಾಟಾ ಮಾಡಲೇಬೇಕಾದ ಪರಿಸ್ಥಿತಿ ಬಂದಿದೆ.
ಸಂಪೂರ್ಣವಾಗಿ ನಿಲ್ಲಿಸಿಲ್ಲದಿದ್ದರೂ, ಭಾರತ ಈಗ ರಷ್ಯಾದ ಕಡೆಗೆ ಮುಖ ತಿರುಗಿಸಿ ನೋಡೋದು ಕಮ್ಮಿ ಮಾಡಿದೆ. ರಷ್ಯಾದಿಂದ ಬರುತ್ತಿದ್ದ ತೈಲದ ಹಡಗುಗಳ ಸಂಖ್ಯೆ ಇಳಿಮುಖವಾಗಿದೆ. ಅಮೆರಿಕ ಮತ್ತು ವೆನೆಜುವೆಲಾದ ಹಡಗುಗಳು ನಮ್ಮ ಬಂದರಿಗೆ ಬರಲು ರೆಡಿಯಾಗಿ ನಿಂತಿವೆ. ಅಂದರೆ, ರಷ್ಯಾದ ಸ್ನೇಹಕ್ಕಿಂತ ಅಮೆರಿಕದ ವ್ಯವಹಾರವೇ ನಮಗೆ ಈಗ ಮುಖ್ಯವಾಗಿ ಬಿಟ್ಟಿದೆ!

ಮಿತ್ರನನ್ನು ಕಳೆದುಕೊಳ್ಳುವ ಅಪಾಯವಿದೆಯಾ?
ಇಲ್ಲಿಯವರೆಗೆ ರಷ್ಯಾ ನಮ್ಮನ್ನ ಕೈ ಬಿಟ್ಟಿಲ್ಲ. 1971ರ ಯುದ್ಧದಿಂದ ಹಿಡಿದು ಇವತ್ತಿನವರೆಗೆ ಪುಟಿನ್ ನಮ್ಮ ಜೊತೆಗಿದ್ದಾರೆ. ಆದರೆ ಇವತ್ತು ನಾವು ಅಮೆರಿಕದ ಮಾತು ಕೇಳಿ ಅವರನ್ನ ದೂರ ಮಾಡ್ತಿರೋದು ಪುಟಿನ್ ಎದೆಯಲ್ಲಿ ನೋವು ಮಾಡಿರಬಹುದು.
ರಷ್ಯಾದ ಒಳಗಿನ ಕುದಿ: ರಷ್ಯಾ ಮೇಲ್ನೋಟಕ್ಕೆ “ನಿಮ್ಮಿಷ್ಟ” ಅಂದರೂ, ಒಳಗೊಳಗೆ ಅವರಿಗೆ ಉರಿ ಹತ್ತಿದೆ. ನಾಳೆ ಚೀನಾದ ಜೊತೆಗಿನ ಗಡಿಯಲ್ಲಿ ನಮಗೆ ಏನಾದರೂ ತೊಂದರೆಯಾದರೆ, ಮೊದಲಿಗೆ ನಮಗೆ ಶಸ್ತ್ರಾಸ್ತ್ರ ಕೊಡುತ್ತಿದ್ದ ರಷ್ಯಾ ಅಂದು ಕೈ ಕೊಡಬಹುದು!

ಬೆಲೆ ಏರಿಕೆಯ ಶಾಕ್: ರಷ್ಯಾ ನಮಗೆ ಸಖತ್ ಡಿಸ್ಕೌಂಟ್‌ನಲ್ಲಿ ತೈಲ ಕೊಡುತ್ತಿತ್ತು. ಈಗ ಅಮೆರಿಕದಿಂದ ತರಬೇಕು ಅಂದ್ರೆ ಟ್ರಾನ್ಸ್‌ಪೋರ್ಟ್ ಖರ್ಚೇ ಜಾಸ್ತಿ. ಅಂದರೆ, ಅತ್ತ ಸ್ನೇಹವೂ ಇಲ್ಲ, ಇತ್ತ ಪೆಟ್ರೋಲ್ ಬೆಲೆಯೂ ಕಡಿಮೆಯಾಗುವ ಚಾನ್ಸ್ ಇಲ್ಲ!
ಮೋದಿ ಅವರ ಈ ನಡೆಯ ಹಿಂದೆ ಒಂದು ದೊಡ್ಡ ರಿಸ್ಕ್ ಇದೆ. ಹಳೆಯ ಗೆಳೆಯನನ್ನು ಬಿಟ್ಟು ಹೊಸ ಶ್ರೀಮಂತ ಗೆಳೆಯನ ಕೈ ಹಿಡಿಯುವುದು ಎಷ್ಟು ಮಟ್ಟಿಗೆ ಸರಿ ಅನ್ನೋದು ಕಾಲವೇ ಉತ್ತರಿಸಬೇಕು. ಆದ್ರೆ ಒಂದು ಮಾತು ನೆನಪಿರಲಿ, ರಷ್ಯಾ ಅನ್ನೋದು ಭಾರತದ ಪಾಲಿಗೆ ಬರೀ ತೈಲದ ಬಾವಿಯಲ್ಲ, ಅದು ಹಳೆಯ ನಂಬಿಕೆ. ಅಮೆರಿಕದ ಮಾತು ಕೇಳಿ ನಾವು ಆ ನಂಬಿಕೆಗೆ ಕೊಳ್ಳಿ ಇಡ್ತಿದ್ದೀವಾ? ಸದ್ಯಕ್ಕೆ ಇದು ಮಿಲಿಯನ್ ಡಾಲರ್ ಪ್ರಶ್ನೆ!
