ಮಂಗಳೂರು: ಕೆ.ಎಸ್. ಹೆಗ್ಡೆ ಆಸ್ಪತ್ರೆಗೆ 14 ವರ್ಷದ ಆ ಮುಗ್ಧ ಬಾಲಕಿ ಬಂದಾಗ ಆಕೆಗೆ ಗೊತ್ತಿರಲಿಲ್ಲ, ತನ್ನ ಹೊಟ್ಟೆಯೊಳಗೆ ಸಾವಿನ ಬಾಂಬೊಂದು ಟಿಕ್ ಟಿಕ್ ಅಂತಿದೆ ಅಂತ. ಕಿಬ್ಬೊಟ್ಟೆ ನೋವು ಅಂತ ಆಕೆ ನರಳುತ್ತಿದ್ದರೆ, ವೈದ್ಯರು ಸ್ಕ್ಯಾನ್ ಮಾಡಿ ನೋಡಿದಾಗ ದಂಗಾಗಿ ಹೋದರು. ಯಕೃತ್ತಿನ (ಲಿವರ್) ಅತ್ಯಂತ ನಾಜೂಕಾದ ʻಕಾಡೇಟ್ ಲೋಬ್’ ಭಾಗದಲ್ಲಿ ಒಂದು ಬೃಹತ್ ಗೆಡ್ಡೆ ಹೆಡೆ ಎತ್ತಿ ಕುಳಿತಿತ್ತು!

ಅದು ಎಂತಹ ಜಾಗ ಅಂದ್ರೆ, ಸ್ವಲ್ಪ ಹೆಚ್ಚು ಕಡಿಮೆಯಾದರೂ ರಕ್ತದ ಕಾಲುವೆಯೇ ಹರಿಯುವಷ್ಟು ಡೇಂಜರಸ್. ಸಾಧಾರಣವಾಗಿ ಹೊಟ್ಟೆ ಸೀಳಿ ಮಾಡುವ ಸರ್ಜರಿ ಅಲ್ಲಿ ಕೆಲಸ ಮಾಡಲ್ಲ, ಅದು ಪ್ರಾಣಕ್ಕೇ ಕುತ್ತು. ಆದರೆ, ಕೆಎಸ್ ಹೆಗ್ಡೆ ಆಸ್ಪತ್ರೆಯ ವೈದ್ಯರು ಸೋಲೊಪ್ಪಿಕೊಳ್ಳಲಿಲ್ಲ.
11 ಗಂಟೆಗಳ ರೊಬೊಟಿಕ್ ಯುದ್ಧ!
ಕರಾವಳಿ ಕರ್ನಾಟಕದ ಇತಿಹಾಸದಲ್ಲೇ ಮೊದಲ ಬಾರಿಗೆ ಇಂತಹ ಸಂಕೀರ್ಣವಾದ ʻಮಕ್ಕಳ ರೊಬೊಟಿಕ್ ಶಸ್ತ್ರಚಿಕಿತ್ಸೆ’ ನಡೆಸಲು ತಂಡ ಸನ್ನದ್ಧವಾಯಿತು. ಈ ಮಹಾನ್ ಕಾರ್ಯಕ್ಕೆ ಮಾರ್ಗದರ್ಶನ ನೀಡಲು ಪಾಂಡಿಚೇರಿಯ JIPMERನಿಂದ ಪ್ರಖ್ಯಾತ ಶಸ್ತ್ರಚಿಕಿತ್ಸಾ ಗ್ಯಾಸ್ಟ್ರೋಎಂಟರಾಲಜಿಸ್ಟ್ ಪ್ರಾಕ್ಟರ್ ಡಾ. ಕಲಯರಸನ್ ರಾಜಾ ಅವರು ಬಂದಿದ್ದರು.
ಆಸ್ಪತ್ರೆಯ ಮಕ್ಕಳ ಶಸ್ತ್ರಚಿಕಿತ್ಸಾ ವಿಭಾಗದ ತಂಡದ ಜೊತೆಗೆ ಸರ್ಜಿಕಲ್ ಗ್ಯಾಸ್ಟ್ರೋಎಂಟರಾಲಜಿಸ್ಟ್‌ಗಳು ಹಾಗೂ Hepato-Pancreato-Biliary (HPB) ತಜ್ಞರು ಕೈಜೋಡಿಸಿದರು. ಒಂದಲ್ಲ, ಎರಡಲ್ಲ… ಬರೋಬ್ಬರಿ 11 ಗಂಟೆಗಳ ಕಾಲ ಆಪರೇಷನ್ ಥಿಯೇಟರ್ ಒಳಗೆ ಮೌನ ಮತ್ತು ಏಕಾಗ್ರತೆಯ ಹೋರಾಟ ನಡೆಯಿತು.

ಈ ಶಸ್ತ್ರಚಿಕಿತ್ಸೆಯ ಅತಿ ದೊಡ್ಡ ಸವಾಲಿದ್ದುದು ಅರಿವಳಿಕೆ (Anesthesia) ನೀಡುವಲ್ಲಿ. ಅತಿಯಾದ ರಕ್ತಸ್ರಾವದ ಭೀತಿ ಮತ್ತು ಕಡಿಮೆ ರಕ್ತದೊತ್ತಡದ ನಡುವೆ ಮಗುವಿನ ಪ್ರಾಣ ಕಾಪಾಡಬೇಕಿತ್ತು. ಅದನ್ನು ತಜ್ಞ ಅರಿವಳಿಕೆ ತಂಡವು ಅತ್ಯಂತ ಪರಿಣಾಮಕಾರಿಯಾಗಿ ನಿರ್ವಹಿಸಿತು. ಆ ಗೆಡ್ಡೆಯನ್ನು ರೊಬೋಟ್ ನೆರವಿನಿಂದ ಒಂದಿಂಚೂ ಅಪಾಯವಾಗದಂತೆ ಹೊರತೆಗೆಯಲಾಯಿತು.
ಮಾನವೀಯತೆಯ ಮಹಾ ಮಾದರಿ
ಈ ಕಥೆಯ ಕ್ಲೈಮ್ಯಾಕ್ಸ್ ನಿಜಕ್ಕೂ ಕಣ್ಣಾಲಿಗಳನ್ನು ತೇವಗೊಳಿಸುತ್ತೆ. ಆ ಬಾಲಕಿ ಸಾಮಾಜಿಕವಾಗಿ ಅತ್ಯಂತ ಹಿಂದುಳಿದ ಹಿನ್ನೆಲೆಯಿಂದ ಬಂದವಳು. ಲಕ್ಷಾಂತರ ರೂಪಾಯಿ ವೆಚ್ಚದ ಈ ಹೈಟೆಕ್ ಚಿಕಿತ್ಸೆ ಆಕೆಗೆ ದಕ್ಕಿದ್ದು ಹೇಗೆ ಗೊತ್ತಾ? ನಿಟ್ಟೆ ಸಂಸ್ಥೆ ಮತ್ತು ಆಡಳಿತ ಮಂಡಳಿಯ ಅಪ್ರತಿಮ ಔದಾರ್ಯದಿಂದ! ಬಡತನ ಚಿಕಿತ್ಸೆಗೆ ಅಡ್ಡಿಯಾಗಬಾರದು ಎಂದು ನಿಟ್ಟೆ ಸಂಸ್ಥೆ ಈ ಶಸ್ತ್ರಚಿಕಿತ್ಸೆಗೆ ಸಂಪೂರ್ಣ ಬೆಂಬಲ ನೀಡಿತು.

ಶಸ್ತ್ರಚಿಕಿತ್ಸೆಯ ನಂತರ ಮಕ್ಕಳ ವೈದ್ಯರು ಮತ್ತು ಮಕ್ಕಳ ತುರ್ತು ನಿಗಾ ಘಟಕದ (PICU) ಸಿಬ್ಬಂದಿಯ ಹಗಲಿರುಳಿನ ಆರೈಕೆಯಿಂದಾಗಿ, ಐದೇ ದಿನದಲ್ಲಿ ಆ ಪುಟ್ಟ ಬಾಲಕಿ ಎದ್ದು ನಿಂತಳು. ಕೆ.ಎಸ್. ಹೆಗ್ಡೆ ಆಸ್ಪತ್ರೆಯಲ್ಲಿ ಕಳೆದ ಒಂದು ವರ್ಷದಲ್ಲಿ ಇಂತಹ 170ಕ್ಕೂ ಹೆಚ್ಚು ಯಶಸ್ವಿ ರೊಬೊಟಿಕ್ ಸರ್ಜರಿಗಳಾಗಿವೆ. ಶಸ್ತ್ರಚಿಕಿತ್ಸೆಯ ನಂತರ ಮಕ್ಕಳ ವೈದ್ಯರು ಮತ್ತು ಮಕ್ಕಳ ತುರ್ತು ನಿಗಾ ಘಟಕದ (PICU) ಸಿಬ್ಬಂದಿಯ ಹಗಲಿರುಳಿನ ಆರೈಕೆಯಿಂದಾಗಿ, ಐದೇ ದಿನದಲ್ಲಿ ಆ ಪುಟ್ಟ ಬಾಲಕಿ ಸಾಮಾನ್ಯ ಸ್ಥಿತಿಗೆ ಬಂದಳು ಈ ಮಗುವಿನ ಸರ್ಜರಿ ಮಾತ್ರ ಕರಾವಳಿಯ ವೈದ್ಯಕೀಯ ಲೋಕದಲ್ಲಿ ಹೊಸ ದಾಖಲೆ ಬರೆದಿದೆ.

ತಂತ್ರಜ್ಞಾನ ಮತ್ತು ವೈದ್ಯರ ಚಾಕಚಕ್ಯತೆ ಆಕೆಯನ್ನು ಸಾವಿನ ದವಡೆಯಿಂದ ಎಳೆದು ತಂದಿದೆ. ಬಾಲಕಿಯ ಮುಖದಲ್ಲಿ ಈಗ ನಗುವಿದೆ, ಆ ನಗುವಿನ ಹಿಂದೆ ನೂರಾರು ವೈದ್ಯಕೀಯ ಕೈಗಳ ಪರಿಶ್ರಮವಿದೆ. ಹ್ಯಾಟ್ಸಾಫ್ ಟು ಕೆ.ಎಸ್. ಹೆಗ್ಡೆ ಟೀಮ್ ಎನ್ನುತ್ತಿದ್ದಾರೆ ಸಾವಿರಾರು ಜನರು!