ಮಂಗಳೂರು: ಜಾಗತಿಕ ರಾಜಕಾರಣದ ಚದುರಂಗದಾಟದಲ್ಲಿ ಯಾವುದೂ ಸುಮ್ಮನೆ ನಡೆಯಲ್ಲ. ವಾಷಿಂಗ್ಟನ್‌ನ ವೈಟ್ ಹೌಸ್‌ನಲ್ಲಿ ಡೊನಾಲ್ಡ್ ಟ್ರಂಪ್ ಕುಳಿತಿದ್ದಾರೆ ಅಂದರೆ ಅಲ್ಲಿ ವ್ಯವಹಾರದ ವಾಸನೆ ಇದ್ದೇ ಇರುತ್ತೆ. ಇತ್ತ ನವದೆಹಲಿಯಲ್ಲಿ ನರೇಂದ್ರ ಮೋದಿ ಕೂಡ ಸುಮ್ಮನೆ ಕೂರುವವರಲ್ಲ. ಇವರಿಬ್ಬರೂ ಸೇರಿ ಶುಕ್ರವಾರ ಒಂದು ಪೇಪರ್ ಮೇಲೆ ಸಹಿ ಹಾಕಿದ್ದಾರೆ ನೋಡಿ, ಅದು ಇಡೀ ಜಗತ್ತಿನ ಕಣ್ಣು ಕೆಂಪಾಗಿಸಿದೆ. ಅದುವೇ ʻಮಧ್ಯಂತರ ವ್ಯಾಪಾರ ಚೌಕಟ್ಟು’.

ನೋಡಲು ಇದು ಬರೀ ವ್ಯಾಪಾರದ ಒಪ್ಪಂದದಂತೆ ಕಂಡರೂ, ಇದರ ಒಳಗೆ ಹತ್ತಾರು ತಿರುವುಗಳಿವೆ. ಇದರಲ್ಲಿ ನಮಗೆ ಸಿಕ್ಕಿದ್ದೇನು? ನಾವು ಕಳೆದುಕೊಂಡಿದ್ದೇನು? ಬನ್ನಿ, ಅದರ ಪೋಸ್ಟ್‌ಮಾರ್ಟಂ ಮಾಡೋಣ.
ಅಸಲಿ ಲಾಭಗಳೇನು?
ಮೊದಲನೆಯದಾಗಿ, ಭಾರತದ ಪಾಲಿಗೆ ಇದು ‘ಜಾಕ್‌ಪಾಟ್’. ಯಾಕಂದ್ರೆ ಟ್ರಂಪ್ ಸಾಹೇಬರು ನಮ್ಮ ಮೇಲೆ ಸಿಕ್ಕಾಪಟ್ಟೆ ರೇಗಿದ್ದರು. “ನೀವು ರಷ್ಯಾದಿಂದ ತೈಲ ತಗೊಳ್ತೀರಾ? ಹಾಗಾದ್ರೆ ಐವತ್ತು ಪರ್ಸೆಂಟ್ ಟ್ಯಾಕ್ಸ್ ಕಟ್ಟಿ” ಅಂತ ದಂಡ ಹಾಕಿದ್ದರು. ಈಗ ಆ ದಂಡದ ಭೂತ ಮಾಯವಾಗಿದೆ.
ಸುಂಕದ ಇಳಿಕೆ: ಶೇ. 50 ರಷ್ಟಿದ್ದ ಸುಂಕ ಈಗ ಶೇ. 18 ಕ್ಕೆ ಬಂದಿದೆ. ಅಂದರೆ, ನಮ್ಮ ದೇಶದ ಜವಳಿ, ಚರ್ಮದ ಚಪ್ಪಲಿಗಳು, ಪ್ಲಾಸ್ಟಿಕ್ ಸಾಮಾನುಗಳು ಅಮೆರಿಕದ ಅಂಗಡಿಗಳಲ್ಲಿ ಅಗ್ಗದ ದರಕ್ಕೆ ಸಿಗುತ್ತವೆ. ನಮ್ಮ ರಫ್ತುದಾರರ ಜೇಬು ಈಗ ಫುಲ್ ಆಗಲಿದೆ.

ಸಿ-60 ಸ್ಪೀಡ್‌ನಲ್ಲಿ ಉದ್ಯೋಗ: ವಾಣಿಜ್ಯ ಸಚಿವ ಪಿಯೂಷ್ ಗೋಯಲ್ ಹೇಳೋ ಪ್ರಕಾರ, ಈ ಒಪ್ಪಂದದಿಂದ ಲಕ್ಷಾಂತರ ಮಂದಿ ಯುವಕರಿಗೆ, ಮಹಿಳೆಯರಿಗೆ ಕೆಲಸ ಸಿಗುತ್ತೆ. ಹಳ್ಳಿಹಳ್ಳಿಯ ಕುಶಲಕರ್ಮಿಗಳಿಗೂ ಅಮೆರಿಕದ ಮಾರುಕಟ್ಟೆ ಓಪನ್ ಆಗಿದೆ.
ಟೆಕ್ನಾಲಜಿ ಟ್ರಾನ್ಸ್‌ಫರ್: ಎಕನಾಮಿಕ್ ಪವರ್ ಅಷ್ಟೇ ಅಲ್ಲ, ರಕ್ಷಣೆ ಮತ್ತು ಐಟಿ ಕ್ಷೇತ್ರದಲ್ಲಿ ಅಮೆರಿಕ ನಮ್ಮ ಕೈ ಹಿಡಿಯಲಿದೆ.
ಆದರೆ… ನಮಗಿರುವ ಭಯಗಳೇನು?
ಉಚಿತವಾಗಿ ಏನೂ ಸಿಗಲ್ಲ ಗೆಳೆಯಾ… ಅಮೆರಿಕ ನಮಗೆ ರಿಯಾಯಿತಿ ಕೊಟ್ಟಿದೆ ಅಂದ್ರೆ ಪ್ರತಿಯಾಗಿ ನಾವು ಅವರಿಗೆ ಏನೋ ಕೊಡಲೇಬೇಕು. ಇಲ್ಲಿದೆ ನೋಡಿ ಅಸಲಿ ಕಿರಿಕಿರಿ…
$500 ಬಿಲಿಯನ್ ಸುಲಿಗೆ?: ಮುಂದಿನ ಐದು ವರ್ಷಗಳಲ್ಲಿ ನಾವು ಅಮೆರಿಕದಿಂದ 500 ಬಿಲಿಯನ್ ಡಾಲರ್ ಮೌಲ್ಯದ ಸಾಮಾನನ್ನು ಖರೀದಿಸಬೇಕು. ಇದು ಸಣ್ಣ ಮೊತ್ತವಲ್ಲ. ತೈಲ ಬೇಕೋ ಬೇಡವೋ, ಅಮೆರಿಕದಿಂದಲೇ ತರಬೇಕು ಎನ್ನುವ ಅಲಿಖಿತ ನಿಯಮ ಇಲ್ಲಿ ಕೆಲಸ ಮಾಡಬಹುದು.

ರೈತರ ಆತಂಕ: ಸದ್ಯಕ್ಕೆ ಗೋಯಲ್ ಸಾಹೇಬರು “ಅಕ್ಕಿ, ಗೋಧಿ, ಹಾಲಿನ ಉತ್ಪನ್ನಗಳನ್ನು ರಕ್ಷಿಸಿದ್ದೇವೆ” ಅಂತ ಹೇಳ್ತಿದ್ದಾರೆ. ಆದರೆ ಅಮೆರಿಕದ ಕೃಷಿ ದೈತ್ಯರು ನಮ್ಮ ದೇಶದ ಮಾರುಕಟ್ಟೆಗೆ ನುಗ್ಗಿದರೆ, ನಮ್ಮ ಸಣ್ಣ ರೈತರ ಗತಿ ಏನಾಗುತ್ತೆ ಅನ್ನೋದು ದೊಡ್ಡ ಪ್ರಶ್ನೆ. ಅಮೆರಿಕದ ಸೇಬು, ಬಾದಾಮಿ ನಮ್ಮ ಮಾರುಕಟ್ಟೆಯನ್ನು ಆಕ್ರಮಿಸಿಕೊಳ್ಳಬಹುದು.
ರಷ್ಯಾ ಜೊತೆಗಿನ ಸ್ನೇಹ: “ರಷ್ಯಾದಿಂದ ತೈಲ ತರೋದಿಲ್ಲ” ಅಂತ ನಾವು ಬರೆದುಕೊಟ್ಟಿದ್ದೇವಂತೆ. ಆದರೆ ಕಷ್ಟಕಾಲದಲ್ಲಿ ನಮ್ಮ ಜೊತೆಗಿದ್ದ ರಷ್ಯಾವನ್ನು ಬಿಟ್ಟುಕೊಡುವುದು ಎಷ್ಟರ ಮಟ್ಟಿಗೆ ಸರಿ? ಇದು ನಮ್ಮ ದೇಶದ ಸ್ವತಂತ್ರ ವಿದೇಶಾಂಗ ನೀತಿಗೆ ಪೆಟ್ಟು ನೀಡಬಹುದು.
ಮೋದಿ ಅವರ ಈ ನಡೆ ಅಮೆರಿಕದ ಜೊತೆಗಿನ ಗೆಳೆತನವನ್ನು ಗಟ್ಟಿಗೊಳಿಸಿದೆ ನಿಜ. ಆದರೆ ಟ್ರಂಪ್ ಅಂದರೆ ವ್ಯಾಪಾರಿ. ಅವರು ಕೊಡುವ ಒಂದಕ್ಕೆ ಎರಡನ್ನು ವಾಪಸ್ ಕೇಳುವ ಮನುಷ್ಯ. ಬಜೆಟ್ ಮುಗಿಯಲಿ, ಈ ಒಪ್ಪಂದದ ಅಸಲಿ ಬಣ್ಣ ಹೊರಬರಲಿದೆ. ಅಲ್ಲಿಯವರೆಗೆ ನಾವು ಈ ‘ಆರ್ಥಿಕ ಮಧುಚಂದ್ರ’ವನ್ನು ಎಂಜಾಯ್ ಮಾಡೋಣ!
