ದಿಬಾಂಗ್ ಕಣಿವೆ (ಅರುಣಾಚಲಪ್ರದೇಶ): ದಟ್ಟ ಅರಣ್ಯದ ನಡುವಿನ ರಸ್ತೆಯಲ್ಲಿ ಬೈಕ್‌ನಲ್ಲಿ ತೆರಳುತ್ತಿದ್ದ ಪೊಲೀಸ್ ಅಧಿಕಾರಿಯೊಬ್ಬರ ಮೇಲೆ ಹುಲಿ ದಾಳಿ ನಡೆಸಿ, ಅವರನ್ನು ಕಾಡಿನೊಳಗೆ ಎಳೆದುಕೊಂಡು ಹೋಗಿ ಕೊಂದು ತಿಂದಿರುವ ಭೀಕರ ಘಟನೆ ದಿಬಾಂಗ್ ಕಣಿವೆಯಲ್ಲಿ ಭಾನುವಾರ ತಡರಾತ್ರಿ ಸಂಭವಿಸಿದೆ.

ಘಟನೆಯ ವಿವರ: ಮೃತರನ್ನು ಅರುಣಾಚಲಪ್ರದೇಶದ ಪೊಲೀಸ್ ಇಲಾಖೆಯ ಹೆಡ್ ಕಾನ್‌ಸ್ಟೆಬಲ್ ಚಿಕ್ಸೆನ್ ಮಂಗ್‌ಪಾಂಗ್ ಎಂದು ಗುರುತಿಸಲಾಗಿದೆ. ಭಾನುವಾರ ತಡರಾತ್ರಿ ಇವರು ತಮ್ಮ ಕರ್ತವ್ಯ ಮುಗಿಸಿ ಮನೆಗೆ ಹಿಂತಿರುಗುತ್ತಿದ್ದಾಗ ಈ ದುರಂತ ಸಂಭವಿಸಿದೆ. ದಟ್ಟ ಅರಣ್ಯ ಪ್ರದೇಶದ ರಸ್ತೆಯಲ್ಲಿ ಬೈಕ್‌ನಲ್ಲಿ ಸಂಚರಿಸುತ್ತಿದ್ದಾಗ ಹಠಾತ್ ದಾಳಿ ನಡೆಸಿದ ಹುಲಿ, ಕ್ಷಣಾರ್ಧದಲ್ಲಿ ಅವರನ್ನು ಎಳೆದುಕೊಂಡು ದಟ್ಟ ಕಾಡಿನೊಳಗೆ ಮಾಯವಾಗಿತ್ತು.

ಪತ್ತೆಯಾದ ಶವ: ಅಧಿಕಾರಿ ಮನೆಗೆ ತಲುಪದಿದ್ದಾಗ ಆತಂಕಗೊಂಡ ಸಂಬಂಧಿಕರು ಮತ್ತು ಇಲಾಖೆಯ ಸಿಬ್ಬಂದಿ ಹುಡುಕಾಟ ನಡೆಸಿದರು. ಅರಣ್ಯ ಇಲಾಖೆಯ ಸಹಯೋಗದೊಂದಿಗೆ ನಡೆಸಿದ ಸುದೀರ್ಘ ಕಾರ್ಯಾಚರಣೆಯ ನಂತರ, ರಸ್ತೆಯಿಂದ ಸ್ವಲ್ಪ ದೂರದ ಅರಣ್ಯ ಪ್ರದೇಶದಲ್ಲಿ ಮಂಗ್‌ಪಾಂಗ್ ಅವರ ಶವ ಪತ್ತೆಯಾಗಿದೆ. ಮೃತದೇಹವನ್ನು ವಶಪಡಿಸಿಕೊಂಡಿರುವ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಈ ಘಟನೆಯು ರಾಜ್ಯಾದ್ಯಂತ ಆಘಾತವನ್ನುಂಟು ಮಾಡಿದ್ದು, ಪರ್ವತ ಪ್ರದೇಶಗಳಲ್ಲಿ ವಾಸಿಸುವ ಜನರಲ್ಲಿ ಭೀತಿ ಮೂಡಿಸಿದೆ. ಇತ್ತೀಚಿನ ದಿನಗಳಲ್ಲಿ ಮಾನವ ಮತ್ತು ವನ್ಯಜೀವಿಗಳ ನಡುವಿನ ಸಂಘರ್ಷ ಹೆಚ್ಚುತ್ತಿರುವುದು ಪರಿಸರವಾದಿಗಳಲ್ಲಿ ಮತ್ತು ಸಾರ್ವಜನಿಕರಲ್ಲಿ ಆತಂಕಕ್ಕೆ ಕಾರಣವಾಗಿದೆ. ದಟ್ಟ ಅರಣ್ಯ ಪ್ರದೇಶಗಳಲ್ಲಿ ತಡರಾತ್ರಿಯ ಸಂಚಾರಕ್ಕೆ ನಿರ್ಬಂಧ ಹೇರಬೇಕು ಅಥವಾ ಸೂಕ್ತ ಭದ್ರತೆ ಒದಗಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
