
ಮಂಗಳೂರು: ನೇಪಾಳದಲ್ಲಿ ಕುಳಿತು ಭಾರತೀಯರನ್ನು ಗುರಿಯಾಗಿಸಿಕೊಂಡು ಭಾರಿ ಮೊತ್ತದ Investment Fraud ನಡೆಸುತ್ತಿದ್ದ ಅಂತರರಾಜ್ಯ ಹಾಗೂ ಅಂತರರಾಷ್ಟ್ರೀಯ ವಂಚಕರ ಜಾಲವನ್ನು ಮಂಗಳೂರು ನಗರ ಸೆನ್ ಕ್ರೈಂ ಪೊಲೀಸ್ ಠಾಣೆಯವರು ಭೇದಿಸಿದ್ದು, ಒಟ್ಟು 11 ಜನ ಆರೋಪಿಗಳನ್ನು ದಸ್ತಗಿರಿ ಮಾಡಿದ್ದಾರೆ.

ತನಿಖೆಯಿಂದ ತಿಳಿದುಬಂದಂತೆ, ಈ ವಂಚಕರ ತಂಡದಲ್ಲಿ 16 ಭಾರತೀಯರು ಹಾಗೂ ಚೀನಾದ ನಾಗರಿಕರು ಸೇರಿದ್ದು, ನೇಪಾಳ ಪೊಲೀಸರು ಚೀನಾದ ವಂಚಕರನ್ನು ದಸ್ತಗಿರಿ ಮಾಡಿದ್ದಾರೆ. ಇನ್ನೂ 05 ಭಾರತೀಯ ಆರೋಪಿಗಳು ತಲೆಮರೆಸಿಕೊಂಡಿದ್ದು, ಅವರ ಪತ್ತೆ ಕಾರ್ಯ ಮುಂದುವರೆದಿದೆ.

ಆರೋಪಿತರ ಮೊಬೈಲ್ ಫೋನ್ ಹಾಗೂ ಲ್ಯಾಪ್‌ಟಾಪ್‌ಗಳ ತಾಂತ್ರಿಕ ಪರಿಶೀಲನೆಯ ವೇಳೆ 624 ಬ್ಯಾಂಕ್ ಖಾತೆಗಳ ವಿವರಗಳು ಪತ್ತೆಯಾಗಿದ್ದು, ಈ ಖಾತೆಗಳ ವಿರುದ್ಧ ದೇಶಾದ್ಯಂತ NCRP ಪೋರ್ಟಲ್‌ನಲ್ಲಿ 4,580ಕ್ಕೂ ಅಧಿಕ ಪ್ರಕರಣಗಳು ದಾಖಲಾಗಿವೆ. ಒಂದೇ ಬ್ಯಾಂಕ್ ಖಾತೆಯಲ್ಲಿ ರೂಪಾಯಿ 167 ಕೋಟಿ ಹಣ ವರ್ಗಾವಣೆಯಾಗಿರುವುದು ಕಂಡುಬಂದಿದೆ.

ಮಂಗಳೂರು ಸೆನ್ ಕ್ರೈಂ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣದಲ್ಲಿ, ವಂಚಕರು ಫಿರ್ಯಾದಿದಾರರಿಂದ ರೂಪಾಯಿ 1 ಕೋಟಿ 38 ಲಕ್ಷ ಹಣವನ್ನು 10 ವಿವಿಧ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಿಕೊಂಡು ವಂಚನೆ ಮಾಡಿರುವುದು ಸಾಬೀತಾಗಿದೆ. ಈ ಖಾತೆಗಳ ಮೂಲಕ ಸುಮಾರು ರೂಪಾಯಿ 30.70 ಕೋಟಿ ಹಣದ ವಹಿವಾಟು ನಡೆದಿರುವುದು ತನಿಖೆಯಿಂದ ತಿಳಿದುಬಂದಿದೆ.
ವಂಚಕರು ಸಾಮಾಜಿಕ ಜಾಲತಾಣಗಳ ಮೂಲಕ ಹೂಡಿಕೆದಾರರನ್ನು ಆಕರ್ಷಿಸಿ, ಹೆಚ್ಚಿನ ಲಾಭದ ಆಮಿಷ ಒಡ್ಡಿ ಹಣವನ್ನು ವಿವಿಧ ಖಾತೆಗಳಿಗೆ ವರ್ಗಾಯಿಸಿ, ನಂತರ ಅದನ್ನು *USDT (ಕ್ರಿಪ್ಟೋ ಕರೆನ್ಸಿ)* ಗೆ ಪರಿವರ್ತಿಸಿ ವಿದೇಶಗಳಿಗೆ ಕಳುಹಿಸುತ್ತಿದ್ದರು. ಈ ಹಣದ ಸಂಪೂರ್ಣ ನಿಯಂತ್ರಣ ನೇಪಾಳದಲ್ಲಿರುವ ಗ್ಯಾಂಗ್ ಮೂಲಕ ನಡೆಯುತ್ತಿತ್ತು.
ಕಾಂಬೋಡಿಯಾ, ದುಬೈ ಸೇರಿದಂತೆ ವಿವಿಧ ದೇಶಗಳಲ್ಲಿ ಕುಳಿತು ಕಾರ್ಯನಿರ್ವಹಿಸುತ್ತಿದ್ದ ಮತ್ತೊಂದು ತಂಡ, ವಿದೇಶಕ್ಕೆ ಹೋಗಿರುವ ಭಾರತೀಯರ ಮೂಲಕ ಸ್ಥಳೀಯ ಭಾಷೆಯಲ್ಲಿ ಮಾತನಾಡಿಸಿ ಹೂಡಿಕೆದಾರರನ್ನು ನಂಬಿಸಿ ಹಣ ಹೂಡಿಕೆ ಮಾಡಿಸುತ್ತಿದ್ದುದೂ ಬೆಳಕಿಗೆ ಬಂದಿದೆ.
ಪೊಲೀಸರು ಡಿಜಿಟಲ್ ಸ್ಲೇವರಿ ಬಗ್ಗೆ ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ್ದು, ವಿದೇಶದಲ್ಲಿ ಉದ್ಯೋಗ ನೀಡುವುದಾಗಿ ನಂಬಿಸಿ ಯುವಕರನ್ನು ಮೋಸದ ಜಾಲಕ್ಕೆ ಸಿಲುಕಿಸುವ ಪ್ರಕರಣಗಳ ಬಗ್ಗೆ ಜಾಗೃತಿ ವಹಿಸುವಂತೆ ತಿಳಿಸಿದ್ದಾರೆ. ಈಗಾಗಲೇ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂತಹ 06 ಜನರನ್ನು ರಕ್ಷಿಸಲಾಗಿದ್ದು, ಸಂಬಂಧಪಟ್ಟಂತೆ ಪ್ರಕರಣಗಳು ದಾಖಲಾಗಿವೆ.
ಪೊಲೀಸರು ಹೂಡಿಕೆದಾರರು ಹಾಗೂ ಸಾರ್ವಜನಿಕರಿಗೆ, ಹೆಚ್ಚಿನ ಲಾಭದ ಆಮಿಷಕ್ಕೆ ಬಲಿಯಾಗದೆ, SEBI ನೋಂದಾಯಿತ ಸಂಸ್ಥೆಗಳ ಮೂಲಕ ಮಾತ್ರ ಹೂಡಿಕೆ ಮಾಡಬೇಕು, ಮತ್ತು ಸೈಬರ್ ವಂಚನೆ ಸಂಭವಿಸಿದ ತಕ್ಷಣ 1930ಗೆ ಕರೆ ಮಾಡಿ ಹಾಗೂ ಪೊಲೀಸ್ ಠಾಣೆಗೆ ದೂರು ನೀಡಬೇಕು ಎಂದು ಸಲಹೆ ನೀಡಿದ್ದಾರೆ.
ಈ ಕಾರ್ಯಾಚರಣೆಯಲ್ಲಿ
21 ಮೊಬೈಲ್ ಫೋನ್, 1 ಲ್ಯಾಪ್‌ಟಾಪ್, 20 ಸಿಮ್ ಕಾರ್ಡ್‌ಗಳು ಹಾಗೂ 20 ಡೆಬಿಟ್/ಕ್ರೆಡಿಟ್ ಕಾರ್ಡ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ ಎಂದು ಇಂದು ಫೆಬ್ರವರಿ 5ರಂದು ಗುರುವಾರ ಕರೆದ ಪತ್ರಿಕಾ ಗೋಷ್ಠಿಯಲ್ಲಿ ಮಂಗಳೂರು ಸಿಟಿ ಪೊಲೀಸ್ ಕಮೀಷನರ್ ಸುಧೀರ್ ಕುಮಾರ್ ರೆಡ್ಡಿ ಅವರು ಹೇಳಿದ್ದಾರೆ.