ಮಂಗಳೂರು: ಉದ್ಯೋಗ ಖಾತ್ರಿ ಯೋಜನೆಯಲ್ಲಿನ ಗಾಂಧಿ ಹೆಸರು ಕೈಬಿಟ್ಟಿದ್ದಕ್ಕೆ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ನೂರು ಕಿಮೀ ದೂರ ಪಾದಯಾತ್ರೆ ನಡೆಸಲು ಮುಂದಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಗಡಿಭಾಗವಾದ ಸುಳ್ಯದ ಗಾಂಧಿ ಮೈದಾನದಿಂದ ಮೂಲ್ಕಿಯವರೆಗೆ ನಾಲ್ಕು ದಿನಗಳ ಕಾಲ ಪಾದಯಾತ್ರೆ ನಡೆಯಲಿದ್ದು ಕಾಂಗ್ರೆಸ್ ಹಿರಿ ಕಿರಿಯ ನಾಯಕರಲ್ಲದೆ ಸಾವಿರಾರು ಮಂದಿ ಕಾರ್ಯಕರ್ತರು ಪಾಲ್ಗೊಳ್ಳಲಿದ್ದಾರೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ಪತ್ರಿಕಾಗೋಷ್ಟಿಯಲ್ಲಿ ಮಾಹಿತಿ ನೀಡಿದರು.

ಫೆ.9ರಿಂದ 12ರವರೆಗೆ ಪಾದಯಾತ್ರೆ ನಡೆಯಲಿದ್ದು ಸುಳ್ಯದಲ್ಲಿ ಪಾದಯಾತ್ರೆಗೆ ಚಾಲನೆ ನೀಡಲಿದ್ದು ಮೂಲ್ಕಿ ಪೇಟೆಯಲ್ಲಿ ಸಮಾರೋಪ ಕಾರ್ಯಕ್ರಮ ನಡೆಯಲಿದೆ ಎಂದು ಹೇಳಿದರು.

ಫೆ.9ರಂದು ಮೊದಲ ದಿನದ ಪಾದಯಾತ್ರೆ ಕುಂಬ್ರದವರೆಗೆ ನಡೆಯಲಿದ್ದು ಎರಡನೇ ದಿನ ಮಾಣಿ, ಮೂರನೇ ದಿನ ಫರಂಗಿಪೇಟೆ ಹಾಗೂ ಮೂರನೇ ದಿನ ಮೂಲ್ಕಿಯಲ್ಲಿ ಮುಕ್ತಾಯ ಕಾಣಲಿದೆ. ಪ್ರತಿನಿತ್ಯ 28 ಕಿಮೀ, 25 ಕಿಮೀ ಹೀಗೆ ಪಾದಯಾತ್ರೆ ನಡೆಯಲಿದ್ದು ಒಟ್ಟು ನೂರು ಕಿಮೀ ದೂರ ಸಾಗುವುದು ಮತ್ತು ಜನರಿಗೆ ಕೇಂದ್ರ ಸರಕಾರ ಎಸಗಿರುವ ದ್ರೋಹವನ್ನು ತೋರಿಸುವುದು ಇದರ ಮುಖ್ಯ ಉದ್ದೇಶ ಎಂದು ವಿಧಾನ ಪರಿಷತ್ ಶಾಸಕ ಐವನ್ ಡಿಸೋಜ ಹೇಳಿದರು.

ಕಾಂಗ್ರೆಸ್ ಸರಕಾರ ಪ್ರಾರಂಭಿಸಿದ್ದ ಮನರೇಗಾ ಯೋಜನೆಯ ಸ್ವರೂಪ ಬದಲಿಸಿದ್ದಲ್ಲದೆ ಮಹಾತ್ಮಾ ಗಾಂಧಿಯವರ ಹೆಸರನ್ನೇ ಯೋಜನೆಯಿಂದ ಕೈಬಿಟ್ಟಿರುವ ಕೇಂದ್ರ ಸರಕಾರದ ವಿರುದ್ಧ ರಾಜ್ಯ ಸರಕಾರ ಈಗಾಗಲೇ ವಿಧಾನಸಭೆಯಲ್ಲಿ ಅವಿಶ್ವಾಸ ನಿರ್ಣಯವನ್ನು ಮಂಡಿಸಿದೆ. ಕೇಂದ್ರ ಸರಕಾರದ ಜನವಿರೋಧಿ ನೀತಿಯನ್ನು ಜನರಿಗೆ ಮನದಟ್ಟು ಮಾಡಿಸಲು ಈ ನಾಲ್ಕು ದಿನಗಳ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ. ರಾಜ್ಯ ನಾಯಕರು ಈ ಪಾದಯಾತ್ರೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪದ್ಮರಾಜ್ ಆರ್. ಮಾಧ್ಯಮಗಳಿಗೆ ಮಾಹಿತಿ ನೀಡಿದರು.
