7 ವರ್ಷಗಳಿಂದ ತಲೆಮರೆಸಿಕೊಂಡಿದ್ದ ವಂಚನೆ ಪ್ರಕರಣದ ಆರೋಪಿ ಕೇರಳದಲ್ಲಿ ಬಂಧನ

ಮಂಗಳೂರು: ಕಂಕನಾಡಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಂಚನೆ ಪ್ರಕರಣ ದಾಖಲಾಗಿ ಕಳೆದ ಏಳು ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಪೊಲೀಸರು ಕೇರಳದಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

​ಕೇರಳದ ಕೊಲ್ಲಂ ನಿವಾಸಿ ಜಯಚಂದ್ರ (66) ಬಂಧಿತ ಆರೋಪಿ.

2019ರಲ್ಲಿ ಕಂಕನಾಡಿ ನಗರ ಪೊಲೀಸ್ ಠಾಣೆಯಲ್ಲಿ ಈತನ ವಿರುದ್ಧ ಐಪಿಸಿ ಸೆಕ್ಷನ್ 409, 420, 507 ರಡಿ ವಂಚನೆ ಮತ್ತು ಜೀವಬೆದರಿಕೆ ಪ್ರಕರಣ ದಾಖಲಾಗಿತ್ತು (ಅ.ಕ್ರ. 69/2019). ಪ್ರಕರಣ ದಾಖಲಾದ ದಿನದಿಂದಲೂ ಆರೋಪಿಯು ನ್ಯಾಯಾಲಯಕ್ಕೆ ಹಾಜರಾಗದೆ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ತಲೆಮರೆಸಿಕೊಂಡಿದ್ದನು. ಈ ಹಿನ್ನೆಲೆಯಲ್ಲಿ ಮಾನ್ಯ ನ್ಯಾಯಾಲಯವು ಆರೋಪಿಯ ವಿರುದ್ಧ ಬಂಧನ ವಾರಂಟ್ ಹೊರಡಿಸಿತ್ತು. ಆರೋಪಿ ಪತ್ತೆಯಾಗದ ಕಾರಣ ಪೊಲೀಸರು ‘ಅಬ್ಸ್ಕಾಂಡಿಂಗ್ ಚಾರ್ಜ್‌ಶೀಟ್’ (ತಲೆಮರೆಸಿಕೊಂಡಿರುವ ದೋಷಾರೋಪ ಪಟ್ಟಿ) ಸಲ್ಲಿಸಿದ್ದರು.


ಮಂಗಳೂರು ದಕ್ಷಿಣ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತರು ಹಾಗೂ ಕಂಕನಾಡಿ ನಗರ ಠಾಣಾ ನಿರೀಕ್ಷಕರ ಮಾರ್ಗದರ್ಶನದಲ್ಲಿ, ಉಪನಿರೀಕ್ಷಕರ ನೇತೃತ್ವದ ತಂಡವು ಆರೋಪಿಯ ಪತ್ತೆಗೆ ಜಾಲ ಬೀಸಿತ್ತು. ಖಚಿತ ಮಾಹಿತಿಯ ಮೇರೆಗೆ ಫೆಬ್ರವರಿ 3ರಂದು ಕೇರಳದ ಕೊಲ್ಲಂ ನಗರದ ವಟ್ಟಕುಟ್ಟು ಎಂಬಲ್ಲಿರುವ ಆರೋಪಿಯ ಮನೆ ‘ಲಲಿತ ಮಂದಿರಂ’ ಮೇಲೆ ದಾಳಿ ನಡೆಸಿದ ತಂಡವು ಆತನನ್ನು ವಶಕ್ಕೆ ಪಡೆದಿದೆ.

​ಈ ಯಶಸ್ವಿ ಕಾರ್ಯಾಚರಣೆಯಲ್ಲಿ ಕಂಕನಾಡಿ ನಗರ ಠಾಣೆಯ ಸಿಬ್ಬಂದಿಗಳಾದ ಹೆಚ್.ಸಿ. 944 ಬಾಲರಾಜ್ ಹಾಗೂ ಪಿ.ಸಿ. 3046 ರವಿಕುಮಾರ್ ಪಾಲ್ಗೊಂಡಿದ್ದರು. ಬಂಧಿತ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಪೊಲೀಸ್ ಪ್ರಕಟಣೆ ತಿಳಿಸಿದೆ.

error: Content is protected !!