ಬೆಂಗಳೂರು: ಎರಡೂವರೆ ವರ್ಷಗಳಲ್ಲಿ ಕರಾವಳಿ ಅಭಿವೃದ್ಧಿ ಪ್ರಾಧಿಕಾರಕ್ಕೆ ಸರಕಾರ ಒಂದೇ ಒಂದು ರೂಪಾಯಿ ಅನುದಾನ ನೀಡಿಲ್ಲ. ತಾನೇ ಘೋಷಿಸಿದ್ದ ಯಾವುದೇ ಅಭಿವೃದ್ಧಿ ಯೋಜನೆಗಳು ಕಾರ್ಯಗತ ಮಾಡಿಲ್ಲ. ಹೀಗಾದರೆ, ಪ್ರವಾಸೋದ್ಯಮ ಬೆಳೆಯುವುದು ಹೇಗೆ ಎಂದು ಬಿಜೆಪಿ ಶಾಸಕ ವೇದವ್ಯಾಸ ಕಾಮತ್ ಪ್ರಶ್ನಿಸಿದ್ದಾರೆ.

ರಾಜ್ಯಪಾಲರ ಭಾಷಣದ ವಂದನಾ ನಿರ್ಣಯದ ಮೇಲೆ ಮಾತನಾಡಿದ ಅವರು, ರಾಜ್ಯಪಾಲರ ಬಾಯಿಂದ ಬರೀ ಸುಳ್ಳು ಹೇಳಿಸಲು ಸರಕಾರ ನೋಡಿದೆ. ಹಾಗೆ ನೋಡಿದರೆ, ಮುದ್ರಾಂಕ, ಅಬಕಾರಿ ಸಹಿತ ಎಲ್ಲದರ ದರವನ್ನೂ ಹೆಚ್ಚಿಸಲಾಗಿದೆ. ಇದರಿಂದ ಬೇಸತ್ತ ಜನ ನೆಮ್ಮದಿಯಿಂದ ಸಾಯಲಿಕ್ಕೂ ಈ ಸರಕಾರ ಬಿಟ್ಟಿಲ್ಲ. ಯಾಕೆಂದರೆ, ಮರಣ ಪ್ರಮಾಣಪತ್ರದ ಶುಲ್ಕವನ್ನೂ 5 ರೂ.ಗಳಿಂದ 70 ರೂ.ಗಳಿಗೆ ಹೆಚ್ಚಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಸರಕಾರ ಬಂದಾಗಿನಿಂದ ನನ್ನ ಕ್ಷೇತ್ರದಲ್ಲಿ ಒಂದೇ ಒಂದು ಶಿಲಾನ್ಯಾಸ ಕಾರ್ಯಕ್ರಮ ಆಗಿಲ್ಲ. ನಮ್ಮಲ್ಲಿ ಮಾತ್ರವಲ್ಲ; ಎಲ್ಲಿಯೂ ಅಭಿವೃದ್ಧಿ ಕಾರ್ಯಕ್ರಮಗಳಾಗುತ್ತಿಲ್ಲ. ಆರ್ಥಿಕ ಶಿಸ್ತು ಇದೆ ಎಂದು ಹೇಳಿಕೊಳ್ಳುತ್ತಾರೆ. ಆದರೆ ಗುತ್ತಿಗೆದಾರರ ಬಿಲ್ ಪಾವತಿಸಲಿಕ್ಕೂ ಹಣ ಇಲ್ಲದಂತಾಗಿದೆ ಎಂದು ದೂರಿದ್ದಾರೆ. ರಾಜ್ಯಪಾಲರ ಭಾಷಣದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದೇವೆ ಎಂದು ಸುಳ್ಳು ಹೇಳಿದ್ದಲ್ಲದೆ, ಭ್ರಷ್ಟಾಚಾರದ ಮಿತಿ ಕೂಡ ಮೀರಿದೆ. ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಸದೆ ಅವುಗಳಿಗೆ ಕೇಂದ್ರದಿಂದ ಬರಬೇಕಾದ ಹಣ ನಿಂತುಹೋಗಿದೆ. ಚುನಾವಣೆ ನಡೆಸಬೇಕಾದ ಸರಕಾರ ಕೇಂದ್ರದ ಮೇಲೆ ಬೊಟ್ಟು ಮಾಡುತ್ತಿದೆ ಎಂದು ಆರೋಪಿಸಿದರು.

ಹಿಂದಿನ ಬಿಜೆಪಿ ಸರಕಾರ ಅನೇಕ ದೇವಸ್ಥಾನಗಳ ಅಭಿವೃದ್ಧಿಗೆ 5ರಿಂದ 10 ಲಕ್ಷ ರೂ. ಅನುದಾನ ನೀಡಿತ್ತು. ಈಗ ಆ ಹಣವನ್ನು ಸ್ಥಗಿತಗೊಳಿಸಲಾಗಿದೆ. ಈ ಮೂಲಕ ದೇವರಿಗೂ ಅನ್ಯಾಯ ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.