ತಿರುವನಂತಪುರ: ತಿರುವನಂತಪುರದ ‘ಗ್ರೀನ್ ಫೀಲ್ಡ್ ಸ್ಟೇಡಿಯಂ’ನಲ್ಲಿ ಇಂದು ನಡೆಯಲಿರುವ 5ನೇ ಮತ್ತು ಕೊನೆಯ ಟಿ20 ಪಂದ್ಯದಲ್ಲಿ ಭಾರತ, ಪ್ರವಾಸಿ ನ್ಯೂಜಿಲೆಂಡ್ ಅನ್ನು ಎದುರಿಸಲಿದೆ.

ಮುಂದಿನ ವಾರ ಆರಂಭವಾಗಲಿರುವ ಟಿ20 ವಿಶ್ವಕಪ್ ಪಂದ್ಯಾವಳಿಯ ಅಭ್ಯಾಸದ ಹಿನ್ನೆಲೆಯಲ್ಲಿ ಮಹತ್ವದ್ದಾಗಿ ಪರಿಣಮಿಸಿದ ಈ ಸರಣಿ, ಟೀಮ್ ಇಂಡಿಯಾದ ಕೆಲವು ಸಮಸ್ಯೆಗೆ ಇನ್ನೂ ಪರಿಹಾರ ಸೂಚಿಸಿಲ್ಲ ಎಂಬುದನ್ನು ಗಮನಿಸಬೇಕು. ಇದರಲ್ಲಿ ಮುಖ್ಯವಾದುದು ಓಪನಿಂಗ್ ಜೋಡಿಯ ಸಮಸ್ಯೆ.

ಒಂದು ಕಡೆ ಅಭಿಷೇಕ್ ಶರ್ಮ ಅವರೇನೋ ಸಿಡಿದು ನಿಲ್ಲುತ್ತಿದ್ದಾರೆ. ಆದರೆ ಇವರ ಜತೆಗಾರ ಸಂಜು ಸ್ಯಾಮ್ಸನ್ ಮಾತ್ರ ತೀವ್ರ ರನ್ ಬರಗಾಲದಲ್ಲಿದ್ದಾರೆ. ಈ ಸರಣಿಯ 4 ಪಂದ್ಯಗಳಲ್ಲಿ ಸಂಜು ಗಳಿಕೆ ಬರೀ 10, 6, 0 ಮತ್ತು 24 ರನ್. ಅರ್ಧ ಶತಕದ ಗಡಿ ಮುಟ್ಟದೆ 9 ಪಂದ್ಯಗಳಾಗಿವೆ. ಇಂಥ ಸ್ಥಿತಿಯಲ್ಲಿ ಇವರನ್ನು ವಿಶ್ವಕಪ್ ನಂಥ ಮಹತ್ವದ ಕೂಟಕ್ಕೆ ನಂಬಿ ಕೂರುವುದು ಹೇಗೆ ಎಂಬುದು ಟೀಮ್ ಇಂಡಿಯಾ ಪಾಲಿನ ಚಿಂತೆಯ ಸಂಗತಿ.

ತಿರುವನಂತಪುರಂ ಪಿಚ್ ಕೂಡ ಹೈ ಸ್ಕೋರಿಂಗ್ ಪಿಚ್ ಎನ್ನಲಾಗಿದೆ. ಮತ್ತೊಂದು ಬ್ಯಾಟಿಂಗ್ ರಸದೌತಣವನ್ನು ನಿರೀಕ್ಷಿಸಲಡ್ಡಿಯಿಲ್ಲ. ಇಲ್ಲಿ ಆಡಿದ 4 ಪಂದ್ಯಗಳಲ್ಲಿ ಭಾರತ ಮೂರನ್ನು ಗೆದ್ದಿದೆ. ಒಂದು ಜಯ 2017ರಲ್ಲಿ ನ್ಯೂಜಿಲೆಂಡ್ ವಿರುದ್ಧವೇ ದಾಖಲಾಗಿದೆ.