ಕಳ್ಳರ ಕರಾಮತ್ತಿಗೆ ಬೆಚ್ಚಿಬಿದ್ದ ಕೊರ್ಬಾ! ಬರೋಬ್ಬರಿ 10 ಟನ್‌ ತೂಕದ ಕಬ್ಬಿಣದ ಸೇತುವೆಯನ್ನೇ ಹೊತ್ತೊಯ್ದ ಕಳ್ಳರು!

ಕೊರ್ಬಾ: ಛತ್ತೀಸ್‌ಗಢದ ಕೊರ್ಬಾ ಜಿಲ್ಲೆಯಲ್ಲಿ ಆಘಾತಕಾರಿ ಕಳ್ಳತನವೊಂದು ಬೆಳಕಿಗೆ ಬಂದಿದ್ದು, ನಾಲ್ಕು ದಶಕಗಳ ಹಿಂದೆ ಕಾಲುವೆಯ ಮೇಲೆ ನಿರ್ಮಿಸಲಾಗಿದ್ದ 10 ಟನ್‌ಗಳಿಗೂ ಹೆಚ್ಚು ತೂಕದ 70 ಅಡಿ ಉದ್ದದ ಕಬ್ಬಿಣದ ಸೇತುವೆಯನ್ನೇ ರಾತ್ರೋರಾತ್ರಿ ಕದ್ದೊಯ್ಯಲಾಗಿದೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.

ಈ ಕಳ್ಳತನದಲ್ಲಿ 15 ಜನರು ಭಾಗಿಯಾಗಿದ್ದಾರೆಂದು ತನಿಖಾಧಿಕಾರಿಗಳು ತಿಳಿಸಿದ್ದು, ಖದೀಮರು ಸೇತುವೆಯನ್ನು ಕತ್ತರಿಸಿ ಸ್ಕ್ರ್ಯಾಪ್ ಆಗಿ ಮಾರಾಟ ಮಾಡಲು ಕದ್ದಿದ್ದಾರೆ. ಈ ಸಂಬಂಧ ಇದುವರೆಗೆ ಐದು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಜನವರಿ 18 ರಂದು, ಧೋಧಿಪಾರ ಪ್ರದೇಶದ ವಾರ್ಡ್ ಸಂಖ್ಯೆ 17 ರಲ್ಲಿ ಪಾದಚಾರಿ ಮಾರ್ಗವಾಗಿ ಬಳಸಲಾಗುತ್ತಿದ್ದ ಹಸ್ಡಿಯೊ ಎಡ ಕಾಲುವೆಯ ಮೇಲೆ ನಿರ್ಮಿಸಲಾಗಿದ್ದ ಕಬ್ಬಿಣದ ಸೇತುವೆ ಕಾಣೆಯಾಗಿರುವುದನ್ನು ನಿವಾಸಿಗಳು ಗಮನಿಸಿದ್ದಾರೆ. ನಂತರ ಈ ಸಂಬಂಧ ಸ್ಥಳೀಯ ಕಾರ್ಪೊರೇಟರ್ ಲಕ್ಷ್ಮಣ್ ಶ್ರೀವಾಸ್ ಅವರು ಪೊಲೀಸರಿಗೆ ದೂರು ನೀಡಿದ್ದಾರೆ ಎಂದು ಕೊರ್ಬಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಲಖನ್ ಪಟ್ಲೆ ತಿಳಿಸಿದ್ದಾರೆ.

ಪ್ರಾಥಮಿಕ ತನಿಖೆಯಲ್ಲಿ ಗುರುತಿಸಲಾಗದ ಆರೋಪಿಗಳು ಸೇತುವೆಯ ಕಬ್ಬಿಣದ ಬೇಲಿಗಳನ್ನು ಕತ್ತರಿಸಲು ಗ್ಯಾಸ್ ಕಟ್ಟರ್‌ಗಳನ್ನು ಬಳಸಿದ್ದಾರೆ ಎಂದು ಅವರು ಹೇಳಿದ್ದಾರೆ. ಸಿಎಸ್‌ಇಬಿ ಪೊಲೀಸ್ ಚೌಕಿಯಲ್ಲಿ ಸ್ವೀಕರಿಸಿದ ಲಿಖಿತ ದೂರಿನ ಆಧಾರದ ಮೇಲೆ, ಈ ಪ್ರಕರಣದ ತನಿಖೆಗಾಗಿ ವಿಶೇಷ ಪೊಲೀಸ್ ತಂಡವನ್ನು ರಚಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ತಾಂತ್ರಿಕ ವಿಶ್ಲೇಷಣೆ, ಮಾಹಿತಿದಾರರು ನೀಡಿದ ಮಾಹಿತಿ ಮತ್ತು ನಿರಂತರ ತನಿಖೆಯ ನಂತರ, ಪೊಲೀಸರು ಪ್ರಕರಣದಲ್ಲಿ 15 ಆರೋಪಿಗಳನ್ನು ಗುರುತಿಸಿದ್ದಾರೆ. ಅವರಲ್ಲಿ ಐದು ಮಂದಿ – ಲೋಚನ್ ಕೆವತ್(20), ಜಯಸಿಂಗ್ ರಜಪೂತ್ (23), ಮೋತಿ ಪ್ರಜಾಪತಿ (27), ಸುಮಿತ್ ಸಾಹು (19) ಮತ್ತು ಕೇಶವಪುರಿ ಗೋಸ್ವಾಮಿ ಅಲಿಯಾಸ್ ‘ಪಿಕ್ಚರ್’ (22)ನನ್ನು ಬಂಧಿಸಲಾಗಿದೆ ಎಂದು ಪಟ್ಲೆ ಹೇಳಿದ್ದಾರೆ.

ಪ್ರಸ್ತುತ ತಲೆಮರೆಸಿಕೊಂಡಿರುವ ಆರೋಪಿ ಕಿಂಗ್‌ಪಿನ್‌ಗಳಾದ ಮುಖೇಶ್ ಸಾಹು ಮತ್ತು ಅಸ್ಲಂ ಖಾನ್ ಸೇರಿದಂತೆ ಉಳಿದ 10 ಆರೋಪಿಗಳನ್ನು ಪತ್ತೆಹಚ್ಚುವ ಪ್ರಯತ್ನಗಳು ನಡೆಯುತ್ತಿವೆ ಎಂದು ಅವರು ತಿಳಿಸಿದ್ದಾರೆ.

ವಿಚಾರಣೆಯ ಸಮಯದಲ್ಲಿ, ಬಂಧಿತ ಆರೋಪಿಗಳು ಕಬ್ಬಿಣವನ್ನು ಸ್ಕ್ರ್ಯಾಪ್ ಆಗಿ ಮಾರಾಟ ಮಾಡಲು ಕಳ್ಳತನ ಮಾಡಿದ್ದಾಗಿ ಒಪ್ಪಿಕೊಂಡಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ. ಕಾಲುವೆಯೊಳಗೆ ಅಡಗಿಸಿಟ್ಟಿದ್ದ ಸುಮಾರು ಏಳು ಟನ್ ಕಬ್ಬಿಣವನ್ನು ವಶಪಡಿಸಿಕೊಳ್ಳಲಾಗಿದೆ ಸಿಎಸ್ಇಬಿ ಪೊಲೀಸ್ ಚೌಕಿ ಇನ್‌ಚಾರ್ಜ್ ಭೀಮಸೇನ್ ಯಾದವ್ ಅವರು ತಿಳಿಸಿದ್ದಾರೆ.

ಕದ್ದ ಕಬ್ಬಿಣವನ್ನು ಸಾಗಿಸಲು ಬಳಸಿದ ವಾಹನವನ್ನು ಸಹ ವಶಪಡಿಸಿಕೊಳ್ಳಲಾಗಿದೆ, ಉಳಿದ ವಸ್ತುಗಳನ್ನು ಎಲ್ಲಿ ಮಾರಾಟ ಮಾಡಲಾಗಿದೆ ಎಂದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ಅವರು ಹೇಳಿದರು.

error: Content is protected !!