ತೋಕೂರಿನಲ್ಲಿ ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ‘ನಾರಿ ನಮನ’ ಕಾರ್ಯಕ್ರಮ; ಹಿರಿಯ ಮಹಿಳೆಯರಿಗೆ ಅನನ್ಯ ಗೌರವ

ಹಳೆಯಂಗಡಿ: ದಕ್ಷಿಣ ಕನ್ನಡ ಜಿಲ್ಲಾ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಶ್ರೀ ಸುಬ್ರಹ್ಮಣ್ಯ ಮಹಾಗಣಪತಿ ಸ್ಪೋರ್ಟ್ಸ್ ಕ್ಲಬ್(ರಿ), ತೋಕೂರು, ಹಳೆಯಂಗಡಿ ಇದರ ಮಹಿಳಾ ಕಾರ್ಯಕಾರಿ ಸಮಿತಿ ಆಶ್ರಯದಲ್ಲಿ “ನಾರಿ ನಮನ” ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಸಾಮಾನ್ಯವಾಗಿ ಸಮಾಜದಲ್ಲಿ ಯಾವುದಾದರೂ ವಿಶೇಷ ಸಾಧನೆ ಮಾಡಿ ಗುರುತಿಸಿಕೊಂಡವರನ್ನೇ ಸನ್ಮಾನಿಸುವ ಪದ್ಧತಿ ಇದೆ. ಆದರೆ ಸಾಮಾನ್ಯ ಮಹಿಳೆಯರು ತಮ್ಮ ಸಂಪೂರ್ಣ ಜೀವನವನ್ನೇ ತಮ್ಮ ಕುಟುಂಬದ ಸುಖ ಸಂತೋಷ ಅಭಿವೃದ್ಧಿಗಾಗಿ ಮುಡಿಪಾಗಿರಿಸಿ, ತೆರೆಮರೆಯ ಕಾಯಿಯಂತೆ ನಿಸ್ವಾರ್ಥವಾಗಿ ಬದುಕು ಸವೆಸುತ್ತಾರೆ.ದೇಶದ ಮುಂದಿನ ಪೀಳಿಗೆಯಾದ ಮಕ್ಕಳಿಗೆ ಉತ್ತಮ ಸಂಸ್ಕಾರವನ್ನು ನೀಡುತ್ತಾ ಸಮಾಜದ ಒಳ್ಳೆಯ ಮೌಲ್ಯಗಳನ್ನು ಬೆಳೆಸುವಲ್ಲಿ ಮಹತ್ವದ ಪಾತ್ರವಹಿಸುತ್ತಾರೆ. ಪ್ರತಿಯೊಬ್ಬ ಮಹಿಳೆಯನ್ನು ಸನ್ಮಾನಿಸುವುದು ನಮ್ಮಿಂದ ಸಾಧ್ಯವಿಲ್ಲದಿದ್ದರೂ ಕೂಡ ಕಳೆದ ಸಮಿತಿ ಸಭೆಯಲ್ಲಿ ಚರ್ಚಿಸಿ, ಗುರುತಿಸಿ ಆರಿಸಿದ ನಾಲ್ಕು ಜನ ಮಹಿಳೆಯರನ್ನು ಸಾಂಕೇತಿಕವಾಗಿ ಗೌರವ ಸನ್ಮಾನ ಅರ್ಪಿಸಿ ನಮ್ಮಿಂದ ಹಿರಿಯ ಮಹಿಳೆಯರಿಗೆ ಸಣ್ಣ ಗೌರವ ಸಲ್ಲಿಸುವ ಪ್ರಯತ್ನ ಎಂಬಂತೆ ನಾರಿ ನಮನ ಕಾರ್ಯಕ್ರಮದ ಮೂಲಕ ಮಹಿಳಾ ದಿನಾಚರಣೆಯನ್ನು ಅರ್ಥಪೂರ್ಣವಾಗಿ ನಡೆಸಲಾಯಿತು.

ಊರಿನ ಹಿರಿಯ ಮಹಿಳೆಯರಾದ ಶ್ರೀಮತಿ ಜಲಜ, ಶ್ರೀಮತಿ ಸುಶೀಲ, ಶ್ರೀಮತಿ ಗುಲಾಬಿ ಹಾಗೂ ಶ್ರೀಮತಿ ಶಾಂತಿ ದೇವಾಡಿಗ ಇವರ ಮನೆಗೆ ಭೇಟಿ ನೀಡಿ ಅವರಿಗೆ ಶ್ರೀದೇವರು ಒಳಿತು ಉಂಟುಮಾಡಲಿ, ಅವರ ಮುಂದಿನ ಜೀವನ ಸುಖಕರವಾಗಿರಲಿ ಎಂದು ಹಾರೈಸಿ,ಶಾಲು, ಫಲವಸ್ತು, ಸ್ಮರಣಿಕೆ ಹಾಗೂ ಗೌರವ ಧನವನ್ನು ನೀಡಿ ಅಭಿನಂದಿಸಲಾಯಿತು. ಅಲ್ಲದೆ, ಅನಾರೋಗ್ಯದಿಂದ ಬಳಲುತ್ತಿರುವ ತೋಕೂರಿನ ಕುಮಾರಿ ಸಾಕ್ಷಿ ಎಂಬ ಮಗುವಿಗೆ ಚಿಕಿತ್ಸೆಯ ವೆಚ್ಚಕ್ಕಾಗಿ ಕಿಂಚಿತ್ತು ಧನ ಸಹಾಯ ನೀಡಲಾಯಿತು.

ಸಂಸ್ಥೆಯ ಗೌರವ ಅಧ್ಯಕ್ಷರು ಯೋಗೀಶ್ ಕೋಟ್ಯಾನ್, ಅಧ್ಯಕ್ಷರು ಸುರೇಶ್ ಶೆಟ್ಟಿ, ಗ್ರಾಮ ಪಂಚಾಯತ್ ಪಡುಪಣಂಬೂರು ಇಲ್ಲಿನ ಮಾಜಿ ಸದಸ್ಯ ಸಂತೋಷ್ ಕುಮಾರ್, ಪ್ರಧಾನ ಕಾರ್ಯದರ್ಶಿ ಸಂತೋಷ್ ದೇವಾಡಿಗ, ನಿಕಟ ಪೂರ್ವ ಗೌರವ ಅಧ್ಯಕ್ಷರು ಪ್ರಶಾಂತ್ ಕುಮಾರ್ ಬೇಕರ್, ಸಮಿತಿ ಸದಸ್ಯರು ಧರ್ಮಾನಂದ ಶೆಟ್ಟಿಗಾರ್, ಗೌರವ ಸಲಹೆಗಾರರು ಗಣೇಶ್ ಪೂಜಾರಿ ಬೆಂಗಳೂರು, ಮಹಿಳಾ ಕಾರ್ಯಾಧ್ಯಕ್ಷೆ ಸುರೇಖಾ ಕಲ್ಲಾಪು , ಜೊತೆ ಮಹಿಳಾ ಕಾರ್ಯದರ್ಶಿ ಶೈಲಾ ಶೆಟ್ಟಿಗಾರ್, ಸಾಂಸ್ಕೃತಿಕ ಕಾರ್ಯದರ್ಶಿ ನೀಮಾ ಸನಿಲ್ ಹಾಗೂ ಮಹಿಳಾ ಸದಸ್ಯೆಯರು ಉಪಸ್ಥಿತರಿದ್ದರು.

error: Content is protected !!